ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾರಿನಲ್ಲಿ 99 ಜೀವಂತ ಗುಂಡು ಹಾಗೂ ಮೂರು ಪಿಸ್ತೂಲ್ ಪತ್ತೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೇರಳದಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ ಕೆಲಸ ಮಾಡುತ್ತಿದ್ದ ನೀರಜ್ ಜೊಸೇಫ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದ ಪೊಲೀಸರು ಈತ ನೀಡಿದ ಸುಳಿವು ಆಧರಿಸಿ ಎರಡು ವಿಶೇಷ ತಂಡಗಳನ್ನು ಕೇರಳ ಹಾಗೂ ನಾಗಲ್ಯಾಂಡ್ಗೆ ಕಳುಹಿಸಲಾಗಿದೆ.
ಆರೋಪಿ ವಿಚಾರಣೆ ವೇಳೆ ನಾಗಲ್ಯಾಂಡ್ನಿಂದ ಪಿಸ್ತೂಲ್ ಹಾಗೂ ಗುಂಡುಗಳನ್ನು ತರಿಸಿಕೊಂಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದ ಎನ್ನಲಾಗುತ್ತಿದೆ. ಒಂದು ಪಿಸ್ತೂಲ್ಗೆ 70 ಸಾವಿರಕ್ಕೆ ಮಾಹಿತಿ ಲಭ್ಯವಾಗಿದೆ. ನಾಗಲ್ಯಾಂಡ್ನ ಕೆಲಪ್ರದೇಶಗಳು ನಕ್ಸಲ್ ಪೀಡಿತ ಪ್ರದೇಶವಾಗಿದೆ. ಈ ವಿಚಾರವಾಗಿ ಗಮನದರಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ನಿಖರವಾಗಿ ಪಿಸ್ತೂಲ್ಎಲ್ಲಿ ತಯರಾಗಿತ್ತು ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ.
ಖರೀದಿಸಿ ಬೆಂಗಳೂರಿಗೆ ತಂದಿದ್ದ ಪಿಸ್ತೂಲ್ಗಳನ್ನು ಕೇರಳಕ್ಕೆ ನೀಡಲು ತರಲಾಗಿದ್ದು, ಯಾರಿಗೆ ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಈಗಾಗಲೇ ಕೇರಳಕ್ಕೆ ತೆರಳಿರುವ ಪೊಲೀಸರ ತಂಡ ಮೊಬೈಲ್ ನಂಬರ್ಗಳ ಪತ್ತೆಯಾದ ಹಿನ್ನೆಲೆ ಆರೋಪಿಗಳ ಬೆನ್ನುಹತ್ತಿದ್ದಾರೆ. ಪ್ರಕರಣ ಸಂಬಂಧ ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿ, "ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಯಾರಿಗೆ ಸರಬರಾಜು ಮಾಡುತ್ತಿರುವ ಬಗ್ಗೆ ಸುಳಿವು ದೊರೆತಿದೆ. ಈ ಸಂಬಂಧ ಪ್ರತ್ಯೇಕ ಎರಡು ತಂಡ ರಚಿಸಿ ಕಳುಹಿಸಲಾಗಿದೆ. ಬಂಧಿತ ಆರೋಪಿಯ ಸಹಚರರನ್ನು ಬಂಧಿಸಿದಾಗ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಣ ಸ್ನೇಹಿತರ ಆತ್ಮಹತ್ಯೆ ಯತ್ನ, ಓರ್ವ ಸಾವು: ಇಬ್ಬರು ಆತ್ನೀಯ ಸ್ನೇಹಿತರು ಮದ್ಯದೊಂದಿಗೆ ವಿಷದ ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ಗುರುವಾರ ಜರುಗಿದೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ನಿವಾಸಿ ಮನು (19) ಹಾಗೂ ಇತ್ತಲದೊಡ್ಡಿ ಗ್ರಾಮ ನಿವಾಸಿ ಆನಂದ್ ಅಲಿಯಾಸ್ ನಾಗೇಂದ್ರ (19) ಆತ್ಮಹತ್ಯೆಗೆ ಯತ್ನಿಸಿದ್ದರು. ಇವರಲ್ಲಿ ನಾಗೇಂದ್ರ ಎಂಬಾತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮನು ಎಂಬಾತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ನಾಗೇಂದ್ರ ಮತ್ತು ಮನು ಪ್ರಾಣ ಸ್ನೇಹಿತರಾಗಿದ್ದು, ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದರು. ನಾಗೇಂದ್ರನ ಕೈಯಲ್ಲಿ ಮನು ಎಂಬ ಹೆಸರು ಮತ್ತು ಮನು ಕೈಯಲ್ಲಿ ನಾಗೇಂದ್ರ ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಇವರಿಬ್ಬರ ಸ್ನೇಹ ನೋಡಿ ಗ್ರಾಮದವರೇ ಇವರನ್ನು ಆಪ್ತಮಿತ್ರರು ಎಂದು ಹೇಳುತ್ತಿದ್ದರು. ನಾಗೇಂದ್ರರ ತಂದೆ ಮತ್ತು ತಾಯಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರು. ಈ ವಿಚಾರಕ್ಕೆ ಬೇಸತ್ತ ನಾಗೇಂದ್ರ ನನಗೆ ಅಪ್ಪ-ಅಮ್ಮ ಯಾರೂ ಇಲ್ಲ. ನಾನು ಬದುಕಿದ್ದರೂ ಸಹ ಪ್ರಯೋಜನವಿಲ್ಲ, ಬದುಕುವುದು ವ್ಯರ್ಥವೆಂದು ಆಗಾಗ ಹೇಳುತ್ತಿದ್ದ ಎಂಬುದು ತಿಳಿದಿತ್ತು.
ಬೇಸತ್ತು ಇಬ್ಬರೂ ಕೂಡ ಕೊಳ್ಳೇಗಾಲ ತಾಲೂಕಿನ ಲಕ್ಕರಸನ ಪಾಳ್ಯ ಗ್ರಾಮದ ರಸ್ತೆಯಲ್ಲಿ ಮದ್ಯದೊಂದಿಗೆ ವಿಷ ಸೇವಿಸಿದ್ದು, ರಸ್ತೆಯಲ್ಲಿಯೇ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಕುರಿತು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: Lokayukta raid: ಮೈಸೂರಿನಲ್ಲಿ ₹2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಇಇ