ಬೆಂಗಳೂರು : ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಸದಸ್ಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಲೀಂ, ಸಭಾ, ಉಬೇದ್, ರಕೀಂ ಹಾಗೂ ಅತೀಕ್ ಬಂಧಿತ ಆರೋಪಿಗಳು. ಡಿಸೆಂಬರ್ 14ರಂದು ಆರ್ ಆರ್ ನಗರದ ಲಾಡ್ಜ್ವೊಂದರ ಬಳಿ ಅತೀವುಲ್ಲಾ ಎಂಬ ಉದ್ಯಮಿಯನ್ನು ಟ್ರ್ಯಾಪ್ ಮಾಡಿದ್ದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಖಲೀಂ ಮತ್ತು ಸಭಾ ಗಂಡ - ಹೆಂಡತಿ ಆಗಿದ್ದಾರೆ. ಆದರೆ ಸಭಾ ಓರ್ವ ವಿಧವೆ ಎಂದು ಅತೀವುಲ್ಲಾಗೆ ಪರಿಚಯಿಸಿದ್ದ ಖಲೀಂ, ಆಕೆಯನ್ನು ನೋಡಿಕೊಳ್ಳುವಂತೆ ತಿಳಿಸಿದ್ದ. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು.
ಡಿಸೆಂಬರ್ 14ರಂದು ಆರ್ ಆರ್ ನಗರದ ಲಾಡ್ಜ್ವೊಂದರ ಬಳಿ ಬರುವಂತೆ ಅತೀವುಲ್ಲಾಗೆ ಸಭಾಳೇ ಕರೆ ಮಾಡಿ ಆಹ್ವಾನಿಸಿದ್ದಳು. ಅದರಂತೆ ತೆರಳಿದ್ದ ಅತೀವುಲ್ಲಾ ರೂಮ್ ಬುಕ್ ಮಾಡಿದ್ದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳಾದ ಖಲೀಂ, ಉಬೇದ್, ರಕೀಂ ಹಾಗೂ ಅತೀಕ್ 'ಈ ವಿಚಾರವನ್ನು ನಿನ್ನ ಮನೆಯವರಿಗೆ ತಿಳಿಸ್ತೀವಿ' ಎಂದು ಗಲಾಟೆ ಆರಂಭಿಸಿದ್ದರು. ಸುಮ್ಮನಿರಬೇಕೆಂದರೆ ಆರು ಲಕ್ಷ ಹಣ ಕೊಡುವಂತೆ ಬೆದರಿಸಿದ್ದರು. ಈ ವೇಳೆ ಮಾಹಿತಿ ಪಡೆದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರ ತಂಡ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳ ತಂಡ ಇದೇ ರೀತಿ ಇನ್ನೂ ಹಲವರಿಗೆ ವಂಚಿಸಿರುವ ಶಂಕೆಯಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ವಿಚಿತ್ರ ಕೇಸ್: ಪ್ರೇಮ ಪುರಾಣವೋ, ಹನಿಟ್ರ್ಯಾಪ್ ಪ್ರಕರಣವೋ.. ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ ಸತ್ಯ!
12 ಲಕ್ಷ ರೂಪಾಯಿ ಕಳ್ಕೊಂಡ ವೃದ್ಧ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ಸೈಬರ್ ಕ್ರೈಂ ಮತ್ತು ಹನಿಟ್ರ್ಯಾಪ್ನಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕಳೆದ ತಿಂಗಳು ನವೆಂಬರ್ನ ಮೊದಲ ವಾರದಲ್ಲಿ ದೆಹಲಿಯಲ್ಲಿ ಕಂಡು ಬಂದ ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಿಡಿಯಲು ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೇಬಲ್‌ಗಳಾದ ದೀಪಕ್, ರಾಜ್‌ದೀಪ್ ಮತ್ತು ರವೀಂದ್ರ ಸೇರಿದಂತೆ ತಂಡ ರಚಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಾಜಸ್ಥಾನಕ್ಕೆ ತೆರಳಿ ರಿಜ್ವಾನ್‌ನನ್ನು ಬಂಧಿಸಿದರು. ರಾಜಸ್ಥಾನದ ನಿವಾಸಿಗಳಾದ ಆರಿಫ್ ಮತ್ತು ಜುನೈದ್ ಈ ಕೆಲಸಕ್ಕೆ ಬೆಂಬಲ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿತ್ತು. ಪೊಲೀಸರು ಅವರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ರಕ್ಷಿಸಲು ಜನರು ಅಲ್ಲಿ ಜಮಾಯಿಸಿದ್ದರು. ಆಗ ಆತನ ಮನೆಯಿಂದ ಆರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.