ಬೆಂಗಳೂರು: ಪ್ರಿಯತಮೆ ನಿರ್ಲಕ್ಷಿಸುತ್ತಿದ್ದಾಳೆ ಎಂದು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಆರೋಪಿಯನ್ನ ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದ ರವಿಕುಮಾರ್ (27) ಎಂಬಾತನನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ರವಿಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದ. ಇಂದಿರಾ ನಗರದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ರವಿಕುಮಾರ್ ಕೆಲಸ ಮಾಡುತ್ತಿದ್ದು, ಅದೇ ಕಂಪನಿಗೆ ಇಂಟರ್ನ್ ಆಗಿ ಯುವತಿ ಸೇರಿದ್ದಳು. ಈಕೆಯು ಸಹ ಪಶ್ಚಿಮ ಬಂಗಾಳ ಮೂಲದವಳಾದ್ದರಿಂದ ಇಬ್ಬರ ನಡುವಿನ ಪರಿಚಯ ಬಳಿಕ ಪ್ರೇಮಾಂಕುರವಾಗಿತ್ತು. ಇಬ್ಬರ ಕುರಿತು ಎರಡೂ ಕುಟುಂಬಗಳಿಗೂ ತಿಳಿದಿತ್ತು. ಆದರೆ ಇತ್ತೀಚೆಗೆ ಬೇರೆ ಕಂಪನಿ ಸೇರಿಕೊಂಡಿದ್ದ ಯುವತಿ, ರವಿಕುಮಾರ್ನನ್ನು ನಿರ್ಲಕ್ಷಿಸಲಾರಂಭಿಸಿದ್ದಳು.
ಪ್ರಿಯತಮೆ ತನ್ನ ಕರೆಗಳಿಗೆ ಉತ್ತರಿಸುತ್ತಿರಲಿಲ್ಲ, ಸರಿಯಾಗಿ ಮಾತನಾಡುತ್ತಿಲ್ಲವೆಂದು ರವಿಕುಮಾರ್ ಕೋಪಗೊಂಡಿದ್ದ. ಬುಧವಾರ ಮುಂಜಾನೆ 3:30ರ ಸುಮಾರಿಗೆ ಪ್ರಿಯತಮೆಯ ಮನೆಗೆ ತೆರಳಿ ಆಕೆಯನ್ನು ಮೈಕೋ ಲೇಔಟಿನ ತನ್ನ ಪಿಜಿ ಬಳಿ ಕರೆತಂದಿದ್ದ ರವಿಕುಮಾರ್ ಆಕೆಯ ಬಳಿ ಮಾತನಾಡುತ್ತಲೇ ಕಬ್ಬಿಣದ ರಾಡ್ ನಿಂದ ತಲೆಗೆ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಠಾಣಾ ಪೊಲೀಸರು ಆರೋಪಿ ರವಿಕುಮಾರ್ನನ್ನು ಬಂಧಿಸಿದ್ದಾರೆ. ಗಾಯಗೊಂಡಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ ವಿಚಾರಣೆ ದಿನ ತಪ್ಪಿಸಿಕೊಂಡು ಪರಾರಿಯಾಗಿದ್ದ ಕೈದಿ: ಮಹಿಳೆಯರ ಪರ್ಸ್ ಕದಿಯೋಕೆ ಹೋಗಿ ಸಿಕ್ಕಾಕೊಂಡ
ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ರೌಡಿಶೀಟರ್ ಹತ್ಯೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರ ಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಸಿದ್ದಾಪುರ ಮಹೇಶ್ ಹತ್ಯೆಯಾದ ರೌಡಿಶೀಟರ್. ಮಹೇಶ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಶುಕ್ರವಾರ ಬಿಡುಗಡೆಯಾಗಿ ಹೊಸ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮಹೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್‌ನಲ್ಲಿ ಮಹೇಶ್ ಲೀಡರ್ ಆಗಿದ್ದ ಎಂದು ತಿಳಿದು ಬಂದಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆಗೆ ಇಳಿದಿರುವುದಾಗಿ ನಗರ ಆಗ್ನೇಯ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಎದುರಾಳಿ ಗ್ಯಾಂಗ್ನ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಮೋಹನ ಅಲಿಯಾಸ್ ಡಬಲ್ ಮೀಟರ್ ಮೋಹನ್, ಸುನೀಲ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.