ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ವಿಶ್ವಕಪ್ ಕ್ರಿಕೆಟ್‌ನ ಮೊದಲ ಪಂದ್ಯ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಕ್ರೀಡಾಂಗಣ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಗುರುವಾರ ಡಾಗ್ ಸ್ಕ್ವಾಡ್ ಸ್ಟೇಡಿಯಂನ ಒಳಗೆ ಪ್ರೇಕ್ಷಕರ ಗ್ಯಾಲರಿ ಸೇರಿದಂತೆ ಸಂಪೂರ್ಣ ಮೈದಾನ ಸುತ್ತಮುತ್ತ ತಪಾಸಣೆ ನಡೆಸಿತು. 700ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಟಿ.ಹೆಚ್.ಶೇಖರ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರೇಕ್ಷಕರು ಟಿಕೆಟ್ ಹಿಂದೆ ನೀಡಲಾಗಿರುವ ನಿಬಂಧನೆಯನ್ನು ಓದಿ ಪಾಲಿಸಲು ಸೂಚಿಸಲಾಗಿದ್ದು, 21 ಗೇಟ್‌ಗಳಲ್ಲೂ ಭಾರಿ ಭದ್ರತೆಯೊಂದಿಗೆ ಪ್ರವೇಶಕ್ಕ ವ್ಯವಸ್ಥೆ ಮಾಡಲಾಗಿದೆ.
ವಾಹನ ನಿಲುಗಡೆ ನಿಷೇಧ: ಪಾಕ್ ಮತ್ತು ಆಸೀಸ್ ಪಂದ್ಯ ಸೇರಿದಂತೆ ಬೆಂಗಳೂರಿನಲ್ಲಿ ಐದು ಪಂದ್ಯಗಳು ನಡೆಯಲಿವೆ. ಈ ವೇಳೆಯಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 11 ರ ವರೆಗೂ ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿಬಾ ರಸ್ತೆ, ಲ್ಯಾವಲ್ಲೆ ರಸ್ತೆ ಅಂಬೇಡ್ಕರ್ ರಸ್ತೆ, ವಿಠಲ ಮಲ್ಯರಸ್ತೆ, ನೃಪತುಂಗ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ ; ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ಪಾಳಯದಲ್ಲಿ ಜ್ವರ
ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಬರುವ ಪ್ರೇಕ್ಷಕರು ಕಿಂಗ್ಸ್ ರಸ್ತೆ, ಯುಬಿ ಸಿಟಿ, ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಪೇ ಆ್ಯಂಡ್ ಪಾರ್ಕ್ ಮಾಡವಂತೆ ತಿಳಿಸಲಾಗಿದೆ. ಆದರೂ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮವಹಿಸಲು ಪ್ರೇಕ್ಷಕರಿಗೆ ಬಿಎಂಟಿಸಿ, ಮೆಟ್ರೋ ಬಳಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಟಿ.ಎಚ್.ಶೇಖರ್ ತಿಳಿಸಿದರು.
5 ಪಂದ್ಯಗಳು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸುತ್ತಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 26 ರಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ, ನವೆಂಬರ್ 4 ರಂದು ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ, ನವೆಂಬರ್ 9 ರಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಹಾಗು ಕೊನೆಯ ನವೆಂಬರ್ 12 ರಂದು ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ಪಂದ್ಯಗಳು ನಡೆಯಲಿದ್ದು, ಮುನ್ನೆಚರಿಕೆ ಕ್ರಮಗಳನ್ನು ಈಗಾಗಲೇ ಪೊಲೀಸರು ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ'ದಿಂದ ವಿಶೇಷ ವ್ಯವಸ್ಥೆ