ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಕಾನ್ಸ್ಟೇಬಲ್ವೋರ್ವರ ವಿರುದ್ಧ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಸದಾಶಿವನಗರದ ಕಾನ್ಸ್ಟೇಬಲ್ ಶಿವಕುಮಾರ್ ತಮ್ಮ ಠಾಣಾ ವ್ಯಾಪ್ತಿ ಬಿಟ್ಟು ಸಹಕಾರ ನಗರದ ಉದ್ಯಮಿಗೆ ಬೆದರಿಸಿ ಹಣ ಪೀಕಿದ್ದಾರೆ ಎನ್ನಲಾಗ್ತಿದೆ.
ಈ ಕುರಿತು ಈಶಾನ್ಯ ವಿಭಾಗ ಡಿಸಿಪಿಗೆ ಸಹಕಾರ ನಗರದ ಉದ್ಯಮಿ ಯೋಗೇಶ್ ಎಂಬುವವರು ದೂರು ನೀಡಿದ್ದಾರೆ. ಹಾಲು ಉದ್ಯಮಿಯಾಗಿರುವ ಯೋಗೇಶ್ ಅವರಿಗೆ ಕ್ರಿಕೆಟ್ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಹೆದರಿಸಿ ಕಾನ್ಸ್ಟೇಬಲ್ ಶಿವಕುಮಾರ್ 3 ಲಕ್ಷ ರೂ ಹಣ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಅನ್ವಯ, ಡಿಸಿಪಿ ಅನೂಪ್ ಶೆಟ್ಟಿ ಯಲಹಂಕ ಎಸಿಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಇತ್ತ ಶಿವಕುಮಾರ್ ಪ್ರಭಾವಿ ರಾಜಕಾರಣಿಯಿಂದ ತನಿಖೆ ನಡೆಸಿ ತನ್ನ ವಿರುದ್ಧ ಕ್ರಮ ಕೈಗೊಳ್ಳದಂತೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಶಿವಕುಮಾರ್ ಭಾತ್ಮಿದಾರನ ಮಾಹಿತಿ ಮೇರೆಗೆ ಬೆಟ್ಟಿಂಗ್ ಕೇಸ್ ವಿಚಾರಕ್ಕೆ ಸಹಕಾರನಗರಕ್ಕೆ ಹೋಗಿದ್ದರು. ಆದರೆ ಭಾತ್ಮಿದಾರ ಮಾಹಿತಿ ಕೊಟ್ಟಿರಲಿಲ್ಲ. ಹಣದ ವ್ಯವಹಾರ ತನಿಖೆ ನಂತರವಷ್ಟೇ ಗೊತ್ತಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತಾಯಿಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ: ಕೆರೆಯಲ್ಲಿ ಶವ ಪತ್ತೆ