ಬೆಂಗಳೂರು: ಒಂದು ಕಡೆ ಸಂಪುಟ ಸೇರಲು ಶಾಸಕರು ಲಾಬಿ ನಡೆಸುತ್ತಿದ್ದರೆ, ಮತ್ತೊಂದೆಡೆ ಸೋತವರಿಗೆ ಸಂಪುಟದಲ್ಲಿ ಅವಕಾಶ ನೀಡದಂತೆ ಲಾಬಿ ನಡೆಯುತ್ತಿದ್ದು, ದೂರು ಹೊತ್ತು ಬಿಜೆಪಿ ಕಚೇರಿ ಸಿಎಂ ನಿವಾಸಕ್ಕೆ ಅಲೆದಾಡುತ್ತಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುವವರೆಗೂ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಸಿಎಂ ನಿವಾಸಕ್ಕೆ ಭೇಟಿ ನೀಡುತ್ತಿದ್ದರೆ, ಇದೀಗ ಸೋತವರಿಗೆ ಸಂಪುಟದಲ್ಲಿ ಸ್ಥಾನ ನೀಡದಂತೆ ಕೆಲ ಶಾಸಕರ ತಂಡ ಲಾಬಿ ಆರಂಭಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಮಾಯಕೊಂಡ ಶಾಸಕ ಲಿಂಗಣ್ಣ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು.
ಸಿ.ಪಿಯೋಗೇಶ್ವರ್ಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎನ್ನುವ ಸುದ್ದಿ ಇದೆ. ಈಗಾಗಲೇ ಸೋತಿರುವ ಲಕ್ಷ್ಮಣ ಸವದಿಯವರಿಗೆ ಡಿಸಿಎಂ ಹುದ್ದೆಯೊಂದಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಎಂ.ಟಿ.ಬಿ ನಾಗರಾಜ್ ಅವರಿಗೂ ಸ್ಥಾನ ನೀಡಲಾಗುತ್ತಿದೆ, ಅವರ ಜೊತೆಗೆ ಸಿ.ಪಿ. ಯೋಗೇಶ್ವರ್ಗೂ ನೀಡಿದರೆ ಹೇಗೆ? ಸವದಿಗೆ ಈಗಾಗಲೇ ಕೊಟ್ಟಾಗಿದೆ. ಎಂಟಿಬಿ ನಾಗರಾಜ್ಗೆ ಕೊಡಲೇಬೇಕಾದ ಅನಿವಾರ್ಯತೆ ಇದೆ. ಆದರೆ ಯೋಗೇಶ್ವರ್ಗೆ ಯಾಕೆ ಕೊಡಬೇಕು, ನೀವು ಸೋತವರಿಗೂ ಸಂಪುಟದಲ್ಲಿ ಸ್ಥಾನ ಕೊಡುತ್ತಾ ಹೋದರೆ ನಾಲ್ಕೈದು ಬಾರಿ ಗೆದ್ದಿರುವ ಹಿರಿಯ ಶಾಸಕರ ಕಥೆ ಏನು?,ಜನ ನಮ್ಮನ್ನೆಲ್ಲಾ ಯಾಕೆ ಗೆಲ್ಲಿಸಬೇಕು ಎಂದು ಕೇಳುತ್ತಾರೆ ಅವರಿಗೆಲ್ಲಾ ಏನು ಹೇಳುವುದು ಎಂದು ಅವಲತ್ತುಕೊಂಡಿದ್ದಾರೆ.
ಯಾವ ಕಾರಣಕ್ಕೂ ಯೋಗೇಶ್ವರ್ಗೆ ಅವಕಾಶ ನೀಡಬಾರದು, ಹಿರಿಯ ಶಾಸಕರನ್ನು ಪರಿಗಣಿಸಬೇಕು. ಈ ಕುರಿತು ಸಿಎಂ ಜೊತೆ ಚರ್ಚಿಸಬೇಕು ಎಂದು ಕಟೀಲ್ಗೆ ಮನವಿ ಸಲ್ಲಿಸಿದರು. ಮನವಿ ಆಲಿಸಿದ ಕಟೀಲ್, ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಲ್ಲವನ್ನೂ ಪರಿಶೀಲಿಸಿಯೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಶಾಸಕರ ನಿಯೋಗಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.