ಬೆಂಗಳೂರು: ಡಿಸೆಂಬರ್ 25ರಂದು ನಗರದ ಸಿಪಿಐ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜ ಪ್ರತಿಕ್ರಿಯಿಸಿದ್ದಾರೆ.
ಮಲ್ಲೇಶ್ವರಂನ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಲು ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಘಟನೆಯನ್ನು ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ ಜನವರಿ 1ರಿಂದ 7ರವರೆಗೆ ಎಡಪಕ್ಷಗಳು ದೇಶಾದ್ಯಂತ ರ‍್ಯಾಲಿ ನಡೆಸಲಿದ್ದು, ಜನವರಿ 8ರಂದು ಭಾರತ ಬಂದ್ ಮಾಡಲಿದ್ದೇವೆ ಎಂದರು. ಎಡ ಪಕ್ಷಗಳು ಹಮ್ಮಿಕೊಂಡಿರುವ ಬಂದ್ಗೆ ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಾರ್ಮಿಕ ಸಮೂಹಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಈ ವೇಳೆ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.