ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ರಾಜಕೀಯ ಶುರು ಆಗಿದ್ದೇ ನನ್ನ ಮನೆಯಿಂದ. ಒಂದು ಕಾಲದಲ್ಲಿ ನನ್ನ ಮನೆ ಮುಂದೆ ಆತ ಕಾಯ್ತಿದ್ದ ಎಂದು ಹೇಳುವ ಮೂಲಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಡಿದ ಡಿಕೆಶಿ, ಯೋಗೇಶ್ವರ್ ನನ್ನ ವೆಲ್ ವಿಷರ್ ಅಲ್ಲ ಅಂತ ನಾನು ಹೇಳಲ್ಲ. ಆದ್ರೆ ಅವನು ನನ್ನ ಮನೆ ಮುಂದೆ ಬಂದು ಕಾಯ್ತಿದ್ದ. ಈಗ ಎಷ್ಟೆಷ್ಟೋ ಕೊಲೆ ಆಗಿವೆ, ಹಾಗೆ, ಹೀಗೆ ಅಂತೆಲ್ಲ ಮಾತನಾಡ್ತಾರೆ. ಸದನಕ್ಕೆ ಬರಲಿ ಆಗ ದಾಖಲೆ ಇಟ್ಕೊಂಡು ಮಾತನಾಡ್ತೇನೆ ಎಂದರು.
ಬಿಜೆಪಿಯವರು ಸೋತವರನ್ನಾದರೂ ಸಚಿವರನ್ನಾಗಿ ಮಾಡಲಿ, ಗೆದ್ದವರಿಗಾದರೂ ಸಚಿವ ಸ್ಥಾನ ಕೊಡಲಿ. ನಮ್ಮನ್ನು ಬಿಟ್ಟು ಹೋದ ಏಳು ಜನರು ಎಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಅವರ ನೋವು ಏನೂ ಅನ್ನೋದು ತಿಳಿದಿದೆ. ಅವರಿಗೆಲ್ಲ ಒಳ್ಳೆಯದಾಗಲಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು.
ದಾಸೋಹ ಸ್ಥಗಿತ ಸರಿಯಲ್ಲ:
ದಾಸೋಹ ಸ್ಥಗಿತಗೊಳಿಸಿದ ಸರ್ಕಾರದ ವಿರುದ್ಧ ಡಿಕೆಶಿ ಗರಂ ಆದ್ರು. ಬಿಜೆಪಿ ಸರ್ಕಾರ ಚೂಸ್ ಆ್ಯಂಡ್ ಪಿಕ್ ಮಾಡ್ತಿದೆ. ದಾಸೋಹ ಸ್ಥಗಿತಗೊಳಿಸಿದ್ದು ಖಂಡನೀಯ. ಹಿಂದೆ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಕೊಲ್ಲೂರು ದೇವಸ್ಥಾನದ ಹಣ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಇದೇ ಬಿಜೆಪಿಯವರು ದೊಡ್ಡ ರಾಜಕಾರಣ ಮಾಡಿದ್ರು. ಈಗ ನೋಡಿದ್ರೆ ಮಠ ಮಾನ್ಯಗಳ ದಾಸೋಹ ಸ್ಥಗಿತಗೊಳಿಸಿದ್ದಾರೆ. ಇದನ್ನೇ ಮುಂದುವರೆಸಿದರೆ ನಾವು ಹೋರಾಟ ಮಾಡಬೇಕಾಗುತ್ತದೆ. ನಾವು ಜಾತಿ-ಧರ್ಮ ನೋಡಿ ಯೋಜನೆ ಜಾರಿಗೆ ತಂದಿರಲಿಲ್ಲ. ಮಠ ಮಾನ್ಯಗಳ ಬಗ್ಗೆ ಬಿಜೆಪಿಯವರ ಧೋರಣೆ ಜನರಿಗೆ ಅರ್ಥವಾಗ್ತಿದೆ. ಯಾರಾದ್ರೂ ದುರುಯೋಗ ಮಾಡ್ತಿದ್ರೆ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ಭಾಸ್ಕರ್ ರಾವ್ ವಿರುದ್ಧ ಆಕ್ರೋಶ:
ಇದೇ ವೇಳೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿರುದ್ದ ಕಿಡಿಕಾರಿದ ಡಿಕೆಶಿ, ದುಡ್ಡು ಕಟ್ಟಿ ಪ್ರೊಟೆಸ್ಟ್ ಮಾಡಿ ಅನ್ನೋದು ಯಾವ ಸರ್ಕಾರಾ ರೀ ಇದು? ಯಾವ ಬಾಂಡ್ ರೀ ಇದು? ಯಾರಿಗೆ ಹೇಳ್ತಿದ್ದೀರಿ ಇದನ್ನೆಲ್ಲ? ಸಿಎಂಗೆ, ಗೃಹ ಸಚಿವರಿಗೆ ಮಾಹಿತಿ ಇಲ್ಲದೆ ಇದನ್ನೆಲ್ಲ ಮಾಡೋದಕ್ಕೆ ಆಗುತ್ತಾ? ಪ್ರಜಾಪ್ರಭುತ್ವ ರಾಷ್ಟ್ರ ಕಣ್ರಿ ಇದು. ಪ್ರತಿಭಟನೆ ಮಾಡೋದಕ್ಕೆ 10 ಲಕ್ಷ ಕಟ್ಟಿ ಅನ್ನೋದೆಲ್ಲ ಎನ್ರೀ ಇದು? ಬಾಂಡ್ ಬರ್ಕೊಡು, ಅದೂ ಇದು ಎನ್ನೋದನ್ನ ಯಾವುದಾದ್ರೂ ದೇಶದಲ್ಲಿ ಕೇಳಿದ್ದೀರಾ? ಎಂದು ಪ್ರಶ್ನಿಸಿದರು.