ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದ ಕಸ್ತೂರ ಬಾ ಹಾಲ್ನಲ್ಲಿ ಇಂದು ಗೋ ಹತ್ಯೆ ನಿಷೇಧ ಕಾನೂನು ಹಾಗೂ ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಸಿರಿಧಾನ್ಯ ಖರೀದಿಸಬೇಕೆಂಬ ವಿಚಾರದ ಬಗ್ಗೆ ರಾಜ್ಯಮಟ್ಟದ ರೈತ ಮುಖಂಡರ ವಿಚಾರಗೋಷ್ಠಿ ನಡೆಯಿತು.
ವಿಚಾರಗೋಷ್ಠಿಯ ನಂತರ ಕುರುಬೂರು ಶಾಂತಕುಮಾರ್ ಮಾತನಾಡಿ, ಗೋವು ರೈತನ ಜೀವನಾಡಿ. ಗೋವಿನಿಂದ ನಮ್ಮ ಕುಟುಂಬಕ್ಕೆ ಬೇಕಾದ ಹಾಲು ವ್ಯವಸಾಯಕ್ಕೆ ಸಗಣಿ, ಗೋಮೂತ್ರ, ಲಭಿಸುತ್ತದೆ. ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡಲು ಸಹಕರಿಸುತ್ತದೆ. ಕ್ನಷಿ ಹುಟ್ಟಿದ ಕಾಲಂದಿಂದಲೂ ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದೇವೆ. 12ನೇ ಶತಮಾನದ ಬಸವಣ್ಣನವರು ಕಲಬೇಡ ಕೊಲಬೇಡ ಎಂದರು. ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾತ್ಮ ಗಾಂಧಿ ಪ್ರಾಣಿ ಹಿಂಸೆ ಬೇಡ ಎಂದರು ಅವರ ಆದರ್ಶ ನಮಗೆ ಮಾದರಿಯಾಗಿದೆ. 2005ರಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಸರ್ಕಾರ ಗೌರವಿಸಬೇಕು ಎಂದರು.
'ಗೋ ಹತ್ಯೆ ಒಪ್ಪುವಂತದ್ದಲ್ಲ': ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಬಗ್ಗೆ ಪಶು ಸಂಗೋಪನಾ ಸಚಿವರು ಕೋಣನಿಗೂ, ಹಸುವಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ. ಹಸುಗಳು ರೈತರ ಬದುಕಿಗೆ ಆಸರೆಯಾಗಿ ಕಾಯಕ ಮಾಡುತ್ತವೆ. ರೈತರ ಜೀವನಾಡಿಗಳಾಗಿವೆ. ಗೌರವ ಭಾವನೆಯಿಂದ ಪೂಜಿಸುತ್ತೇವೆ. ಇಂಥ ಪ್ರಾಣಿಗಳನ್ನು ಹತ್ಯೆ ಮಾಡಿ ಎಂದು ಹೇಳುವುದು ಒಪ್ಪುವಂತದ್ದಲ್ಲ ಎಂದು ಹೇಳಿದರು.
ಕೃಷಿಕರ ಕುಟುಂಬದ ಸದಸ್ಯರಂತಿರುವ ಹಸುಗಳನ್ನು ಹತ್ಯೆ ಮಾಡಲು ಅವಕಾಶ ನೀಡುವುದು ಸರಿಯಲ್ಲ. ಅನಾದಿ ಕಾಲದಿಂದಲೂ ಕೃಷಿ ಜೊತೆ ಜೊತೆಯಾಗಿ ಬದುಕು ನಡೆಸುತ್ತಿರುವ ಹಸುಗಳನ್ನು ಮಾನವೀಯತೆ ಮೀರಿ ಕೊಲ್ಲಲು ಅವಕಾಶ ಕೊಡುವುದು ನಮ್ಮ ಸಂಸ್ಕೃತಿ ಅಲ್ಲ. ಗೋವುಗಳ ವಿಚಾರದಲ್ಲಿ ಧರ್ಮ ರಾಜಕಾರಣ ಮಾಡುವುದನ್ನು ಬಿಡಬೇಕು. ಕಾನೂನಿನಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು. ಕಾನೂನಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವಿಭಾಗ ಮಟ್ಟದ ರೈತ ಸಮಾವೇಶ: ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಬದಲು ಚರ್ಚೆ ಮೂಲಕ ರೈತ ಹಿತರಕ್ಷಣೆ ತಿದ್ದುಪಡಿಗಳಾಗಬೇಕು. ವಯಸ್ಸಾದ ಗೋವುಗಳ ನಿರ್ವಹಣೆ ಹಾಗೂ ಸಾವಿನ ನಂತರ ನಿರ್ವಹಣೆ ಬಗ್ಗೆ ಸರ್ಕಾರ ಯೋಜನೆ ರೂಪಿಸಬೇಕು. ಗೋ ಹತ್ಯೆ ಕಾನೂನಿನಲ್ಲಿರುವ ದುರ್ಬಲ ಅಂಶಗಳನ್ನು ತಿದ್ದುಪಡಿ ಮಾಡಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಯಾಗಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಆರು ಕಡೆ ವಿಭಾಗ ಮಟ್ಟದಲ್ಲಿ ರೈತ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ತಿಂಗಳು ಬಾಗಲಕೋಟೆಯಲ್ಲಿ ರೈತ ಜಾಗೃತಿ ಸಮಾವೇಶ ನಡೆಸಲಾಗುವುದು. ಕೊಪ್ಪಳ, ಗುಲ್ಬರ್ಗ, ಹುಬ್ಬಳ್ಳಿ, ದಾವಣಗೆರೆ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ವಿಭಾಗ ಮಟ್ಟದ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ 50 ಲಕ್ಷ ಟನ್ ಭತ್ತ ಉತ್ಪಾದನೆ:ಕರ್ನಾಟಕದಲ್ಲಿ 30 ಲಕ್ಷ ಎಕರೆ ಪ್ರದೇಶದಲ್ಲಿ 50 ಲಕ್ಷ ಟನ್ ಭತ್ತ ಬೆಳೆಯುತ್ತಾರೆ. 25 ಲಕ್ಷ ಎಕರೆಯಲ್ಲಿ 13 ಲಕ್ಷ ಟನ್ ಜೋಳ ಬೆಳೆಯುತ್ತಾರೆ.15 ಲಕ್ಷ ಎಕರೆಯಲ್ಲಿ 9 ಲಕ್ಷ ಟನ್ ರಾಗಿ ಬೆಳೆಯುತ್ತಾರೆ. ಕರ್ನಾಟಕ ರಾಜ್ಯಕ್ಕೆ ಪಡಿತರ ಅಕ್ಕಿ ವಿತರಿಸಲು ಸುಮಾರು ಐವತ್ತು ಲಕ್ಷ ಟನ್ ಅವಶ್ಯಕತೆ ಇದೆ. ಅಕ್ಕಿ, ರಾಗಿ, ಜೋಳ ಸಿರಿಧಾನ್ಯದ ಜೊತೆಯಲ್ಲಿ ಒಣ ಭೂಮಿ ಪ್ರದೇಶದ ಮಳೆ ಆಶ್ರಯದ ರೈತರ ರಕ್ಷಣೆಗಾಗಿ ಸಿರಿಧಾನ್ಯಗಳನ್ನು ಖರೀದಿಸಿ ವಿತರಿಸುವುದು ಸೂಕ್ತವಾಗಿದೆ. ಸಿದ್ದರಾಮಯ್ಯ ಸ್ವತಃ ರಚಿಸಿದ್ದ ಕೃಷಿ ಬೆಲೆ ಆಯೋಗದ ವರದಿಯಲ್ಲಿ ಇದನ್ನು ತಿಳಿಸಿದ್ದಾರೆ. ಇದೇ ಸರ್ಕಾರ ಯಾಕೆ ವರದಿಯನ್ನು ಗಂಭೀರವಾಗಿ ನೋಡುತ್ತಿಲ್ಲ ಎಂದು ಹೇಳಿದರು.
ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚುವರಿ ಪ್ರೋತ್ಸಾದನ ನೀಡಿ ಖರೀದಿಸುತ್ತೇವೆ ಎಂಬ ಭರವಸೆ ನೀಡಿದ್ರೆ, ರಾಜ್ಯದ ರೈತರೇ ಬೆಳೆದು ಕೊಡುತ್ತಾರೆ.ರೈತರಿಗೂ ಭದ್ರತೆ ಸಿಗುತ್ತದೆ. ಈ ಬಗ್ಗೆ ರೈತ ಮುಖಂಡರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಮಟ್ಟದ ರೈತ ಮುಖಂಡರ ಸಭೆ ನಿರ್ಣಯಿಸಿದೆ. ಗೋ ಹತ್ಯೆ ನಿಷೇಧ ಕಾನೂನು ಉಳಿಸಿ ರೈತರಿಂದ ಅಕ್ಕಿ, ರಾಗಿ, ಜೋಳ ಸಿರಿಧಾನ್ಯ ಖರೀದಿಸಿ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯ ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮರಡಿ ವಿಚಾರಗೋಷ್ಠಿಯಲ್ಲಿ ಮಂಡಿಸಿದ ನಿರ್ಣಯಗಳು ಹೀಗಿವೆ:
*ಕರ್ನಾಟಕ ಕೃಷಿ ಬೆಲೆ ಆಯೋಗ ವರದಿ ನೀಡಿರುವ ಶಿಫಾರಸ್ಸಿನಂತೆ ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಭತ್ತ ರಾಗಿ ಜೋಳ ಸಿರಿಧಾನ್ಯ ಖರೀದಿಸಿ ಪಡಿತರ ಯೋಜನೆಯಲ್ಲಿ ವಿತರಿಸಬೇಕು.
*ಹಳ್ಳಿಗಾಡಿನ ಜನರ ಹಸಿವು ಹಾಗೂ ಅಪೌಷ್ಟಿಕತೆ ನೀಗಿಸಲು ಆಹಾರ ಭದ್ರತೆ ಕಾಯ್ದೆ ಪ್ರಕಾರ ಪಡಿತರ ಧಾನ್ಯಗಳನ್ನೇ ನೀಡಬೇಕು.
*ರೈತರಿಂದ ಖರೀದಿ ಮಾಡಲು ರೈತ ಉತ್ಪಾದಕ ಸಂಸ್ಥೆಗಳು ಹಾಗೂ ವ್ಯವಸಾಯ ಸಹಕಾರ ಸಂಘಗಳ ಸಹಕಾರ ಪಡೆಯಬೇಕು, ರೈತರ ಜೊತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು.
*ರೈತರಿಂದ ಖರೀದಿಸಿದ ಉತ್ಪನ್ನಗಳಿಗೆ ಒಂದು ವಾರದ ಒಳಗೆ ಹಣ ಪಾವತಿಯಾಗುವಂತಹ ವ್ಯವಸ್ಥೆ ಜಾರಿ ಆಗಬೇಕು.
*ರೈತರ ಉತ್ಪನ್ನ ಖರೀದಿ ಮಾಡುವಾಗ ಡಾ ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿರ್ದರಿಸಿ ಖರೀದಿಸಬೇಕು.
ರಾಜ್ಯದ ರೈತ ಮುಖಂಡ ವಿ ನಾರಾಯಣರೆಡ್ಡಿ, ರವಿಕುಮಾರ್, ರಮೇಶ್ ಹೂಗರ, ಬೂಬಾಟಿ, ಯತಿರಾಜ ನಾಯ್ಡು, ಪ್ರಸನ್ನ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.