ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪರೀಕ್ಷೆ ಹೆಚ್ಚಳ ಮಾಡಲು ಪ್ರಧಾನಮಂತ್ರಿಗಳು ನಗರಗಳಿಗೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ಈ ಸೂಚನೆ ನೀಡಿದ್ದಾರೆಂದು ಆಯುಕ್ತರು ತಿಳಿಸಿದರು.
ಸದ್ಯ ನಿತ್ಯ 20 ಸಾವಿರ ಜನರ ಸೋಂಕು ಪರೀಕ್ಷೆ ನಡೆಸಲಾಗುತ್ತಿದ್ದು, ಪಾಸಿಟಿವಿಟಿ ಪ್ರಮಾಣ ಶೇ.13 ರಷ್ಟಿದೆ. ಇದನ್ನು 40 ಸಾವಿರ ಸೋಂಕು ಪರೀಕ್ಷೆಗೆ ಏರಿಕೆ ಮಾಡಿ ಸೋಂಕಿತರ ಪ್ರಮಾಣವನ್ನು ಶೇ.5 ಕ್ಕೆ ಇಳಿಸಲು ಕ್ರಮ ಕೈಗೊಳ್ಳಲಾಗುವುದು. ಮರಣ ಪ್ರಮಾಣ ಶೇ.1 ಕ್ಕಿಂತ ಕಡಿಮೆ ಮಾಡಲು ಸೂಚನೆ ನೀಡಿದ್ದಾರೆ ಎಂದರು.
ಮೈಕ್ರೋ ಕಂಟೈನ್ಮೆಂಟ್ ನಲ್ಲಿ ಪರೀಕ್ಷೆ :
ಒಂದರಿಂದ ಮೂರು ಕೊರೊನಾ ಸೋಂಕು ಪ್ರಕರಣ ದೃಢಪಡುವ ಪ್ರದೇಶವನ್ನು ಮೈಕ್ರೋಕಂಟೈನ್ ಮೆಂಟ್ ಎಂದು ಗುರುತಿಸಿ ಎಲ್ಲರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.
ನಗರದ ಶೇ.58 ರಷ್ಟು ಮಂದಿ ಹೋಂ ಐಸೋಲೇಷನ್ನಲ್ಲಿದ್ದು ಎಲ್ಲರಿಗೂ ಟೆಲಿಮೆಡಿಸಿನ್ ಮೂಲಕ ಸಲಹೆ ಸೂಚನೆ ನೀಡಲಾಗುವುದು. ಸದ್ಯ ಸೋಂಕು ಪರೀಕ್ಷೆಗೆ ಎರಡು ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದು, ಹೆಚ್ಚುವರಿ ಸಿಬ್ಬಂದಿ ಹಾಗೂ ಟೆಸ್ಟಿಂಗ್ ಕಿಟ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.