ಬೆಂಗಳೂರು: ಬೆಳ್ಳಂದೂರು ವಾರ್ಡ್ನ ಎಸ್ಜೆಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಮತ್ತೆ ಹತ್ತು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
ಸೋಮವಾರ ಕೋವಿಡ್ ಸೋಂಕು ಪರೀಕ್ಷೆಗೆ 501 ಜನರ ಸ್ಯಾಂಪಲ್ ಪಡೆಯಲಾಗಿತ್ತು. ಇಂದು ರಿಸಲ್ಟ್ ಬಂದಿದ್ದು, ಈ ಪೈಕಿ ಹತ್ತು ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಂದೇ ಅಪಾರ್ಟ್ಮೆಂಟ್ನಲ್ಲಿ ಒಟ್ಟು 20 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.
ಇಂದು 554 ಜನರ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ನಾಳೆ ಬರಲಿದೆ. ಎಲ್ಲಾ ಪ್ಲಾಟ್ಗಳಲ್ಲಿ 1000 ಜನ ನಿವಾಸಿಗಳಿದ್ದಾರೆ. ಎಲ್ಲಾ ನಿವಾಸಿಗಳೂ, ಸೆಕ್ಯೂರಿಟಿ ಹಾಗೂ ಮನೆಗೆಲಸದವರನ್ನೂ ಸೇರಿದಂತೆ ಒಟ್ಟು 1055 ಜನರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ 20 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ 109 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದ ಬೆನ್ನಲ್ಲೇ ಬೆಳ್ಳಂದೂರಿನ ಅಪಾರ್ಟ್ಮೆಂಟ್ನಲ್ಲಿ ಕೋವಿಡ್ ಪ್ರಕರಣಗಳ ವರದಿಯಾಗಿವೆ.
ಓದಿ :ಅಪಾರ್ಟ್ಮೆಂಟ್ನಲ್ಲಿ 10 ಕೋವಿಡ್ ಪ್ರಕರಣ: ನಾಳೆ ಬರಲಿದೆ 500 ಜನರ ರಿಪೋರ್ಟ್
ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಒಟ್ಟು 9 ಟವರ್ಗಳಿದ್ದು, 4 ಟವರ್ಗಳಲ್ಲಿ 10 ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇಲ್ಲೆಲ್ಲ ಸ್ಯಾನಿಟೈಸ್ ಮಾಡಲಾಗಿದ್ದು, ಎಲ್ಲಾ ಒಂಭತ್ತು ಟವರ್ಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಗಂಟಲು ದ್ರವದ ಮಾದರಿ ಸಂಗ್ರಹಕ್ಕೆ 7 ತಂಡಗಳಲ್ಲಿ 20 ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಸೋಂಕಿತರೊಂದಿಗೆ ಸಂಪರ್ಕಿತರಾದ ಹತ್ತು ಜನರನ್ನು ಪತ್ತೆ ಹಚ್ಚಿ ಐಸೋಲೇಟ್ ಮಾಡಲಾಗಿದೆ. ಅಪಾರ್ಟ್ಮೆಂಟ್ನ ವೆಲ್ಫೇರ್ ಅಸೋಸಿಯೇಷನ್ಗೆ ಕ್ವಾರಂಟೈನ್ ನಿಯಮಗಳನ್ನು ತಿಳಿಸಲಾಗಿದೆ. ಕೋವಿಡ್ ತ್ಯಾಜ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. 24×7 ಸಿದ್ಧವಾಗಿರುವ ಆರೋಗ್ಯ ತಂಡವನ್ನು ನಿಯೋಜಿಸಲಾಗಿದೆ.