ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ಸೋಂಕಿತರ ಬಿಡುಗಡೆ ಮಾಡುವ ಮಾಹಿತಿಯನ್ನು ತ್ವರಿತವಾಗಿ ಎಸ್ಎಎಸ್ಟಿ ಪೋರ್ಟಲ್‌ನಲ್ಲಿ ದಾಖಲಿಸುವ ಬಗ್ಗೆ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುವವರ ಡಿಸ್ಚಾರ್ಜ್ ಆಗುವ ನಿಖರವಾದ ಮಾಹಿತಿಯನ್ನು ನೀಡುತ್ತಿಲ್ಲ. ಹೀಗಾಗಿ, ಎಲ್ಲಾ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳು ಮತ್ತು ಆರೋಗ್ಯ ಮಿತ್ರ ಸಿಬ್ಬಂದಿ ಸೋಂಕಿತ ವ್ಯಕ್ತಿ ದಾಖಲಾಗಿ ಡಿಸ್ಚಾರ್ಜ್ ಆಗುವ ತನಕ ನಿಖರ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ದಾಖಲಿಸಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಆದೇಶ ಹೊರಡಿಸಿದ್ದಾರೆ.
ಪ್ರತಿ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಹೆಲ್ಪ್ ಹೆಸ್ಕ್ ಇದ್ದರೂ ಖಾಸಗಿ ಆಸ್ಪತ್ರೆಗಳು ಸರಿಯಾದ ಮಾಹಿತಿ ನೀಡದೆ ಕಡೆಗಣಿಸುತ್ತಿವೆ. ಹಲವು ರೋಗಿಗಳು ಬಿಡುಗಡೆ ಆದರೂ ಮಾಹಿತಿ ನೀಡುತ್ತಿಲ್ಲ. ಅದೇ ಸರ್ಕಾರಿ ಕೋಟಾದಡಿ ಖಾಸಗಿಯಾಗಿ ಬರುವ ಸೋಂಕಿತರನ್ನು ದಾಖಲಿಸಲಾಗ್ತಿದೆ ಎಂಬ ಮಾಹಿತಿಯೂ ಬಂದಿದೆ. ಜೊತೆಗೆ ರೋಗಿಯು ದಾಖಲಾದ ಐದು ದಿನಕ್ಕೊಮ್ಮೆ, ಹತ್ತು ದಿನಕ್ಕೊಮ್ಮೆ ಕಡ್ಡಾಯವಾಗಿ ಮಾಹಿತಿಯನ್ನು ನೀಡಬೇಕು. ಇಲ್ಲವಾದಲ್ಲಿ ರೋಗಿಯು ಡಿಸ್ಚಾರ್ಜ್ ಆಗಿದ್ದಾರೆ ಎಂದೆ ಪರಿಗಣಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಆರೋಗ್ಯ ಮಿತ್ರದಲ್ಲಿ ಪ್ರತೀ ದಿನ ಡಿಸ್ಚಾರ್ಜ್ ಆದ ರೋಗಿಯ ಮಾಹಿತಿ ಇರಬೇಕು. ಇದೆಲ್ಲವನ್ನು ನೋಡಿಕೊಳ್ಳಲು 50 ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.