ಬೆಂಗಳೂರು: ಕೊರೊನಾ ನಮಗೆ ಬಹಳ ಪಾಠ ಕಲಿಸಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನ 120 ಆ್ಯಂಬುಲೆನ್ಸ್ಗಳನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಮಾತನಾಡಿದರು. 70 ವರ್ಷಗಳಿಂದ ಆರೋಗ್ಯ ಕ್ಷೇತ್ರವನ್ನು ಮರೆತಿದ್ದೆವು. ಆದರೆ ಕೊರೊನಾ ಸಾಕಷ್ಟು ಬದಲಾವಣೆ ತರಲು ಸಹಕಾರಿ ಆಯಿತು. ಇವತ್ತು ಆರೋಗ್ಯ ಕ್ಷೇತ್ರ ಬಹಳ ಬದಲಾಗಿದೆ ಎಂದರು.
ಆರೋಗ್ಯಕ್ಕೆ ಮುಖ್ಯ ಜೀವನಾಡಿ ಆ್ಯಂಬುಲೆನ್ಸ್. ಆರೋಗ್ಯ ಯಾವಾಗ ಬೇಕಾದರೂ ಕೈಕೊಡಬಹುದು. ಆ ಸಂದರ್ಭದಲ್ಲಿ ಆಸ್ಪತ್ರೆಗೆ ಸೇರಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಆ್ಯಂಬುಲೆನ್ಸ್ ಸೇವೆ ಇತ್ತು. ಕೆಲವೇ ನಿಮಿಷಗಳಲ್ಲಿ ಆ್ಯಂಬುಲೆನ್ಸ್ ಆಸ್ಪತ್ರೆಗೆ ತಲುಪಬೇಕಾದ ಅವಶ್ಯಕತೆ ಇದೆ. ನಮ್ಮ ಹಳ್ಳಿ ಕಡೆಯೊಂದು ಒಂದು ಮಾತು ಇದೆ. ನೂರಾ ಎಂಟು ಸಮಸ್ಯೆ ಇದೆ ಅಂತ. ಅದೇ ಹೆಸರಿನ 108 ಆ್ಯಂಬುಲೆನ್ಸ್ ಇದೆ. ಇದು ಆರೋಗ್ಯಕ್ಕೆ ಪರಿಹಾರದ ಸಂಕೇತ ಎಂದು ತಿಳಿಸಿದರು.
ಆರೋಗ್ಯ ಸಚಿವರಾದ ಸುಧಾಕರ್ ಡಾಕ್ಟರ್ ಕೂಡ ಆಗಿದ್ದಾರೆ. ಬಹಳ ಬುದ್ಧಿವಂತರಿದ್ದಾರೆ, ಅದು ನಮಗೆ ತೊಂದರೆ ಕೂಡ ಆಗುತ್ತದೆ ಎಂದು ಹೇಳುವ ಮೂಲಕ ನಗೆಗಡಲಿನಲ್ಲಿ ತೇಲಿಸಿದರು. ಕೊರೊನಾ ಒಂದು ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಆರೋಗ್ಯ ಸಚಿವರು ಪ್ರತಿ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹಗಲು ರಾತ್ರಿ ಆರೋಗ್ಯ ಸಿಬ್ಬಂದಿ ದುಡಿದಿದ್ದಾರೆ. ಇದು ಸುಲಭದ ಮಾತಲ್ಲ. ನಾನು ಹತ್ತಿರದಿಂದ ಕೊರೊನಾ ವಾರಿಯರ್ ಕೆಲಸ ನೋಡಿದ್ದೇನೆ ಎಂದು ಡಾಕ್ಟರ್ ಮತ್ತು ಆರೋಗ್ಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ನೇತ್ರಾವತಿ ನದಿಯಲ್ಲಿ ತೇಲಿ ಬಂತು ಯುವತಿ ಶವ : ಸಮುದ್ರ ಸೇರುವುದನ್ನು ತಪ್ಪಿಸಿದ ಮೀನುಗಾರರು