ಬೆಂಗಳೂರು: ಓಮಿಕ್ರಾನ್ ಸಬ್‌ವೇರಿಯಂಟ್ ಜೆಎನ್.1 ಹಾಗು ಕೋವಿಡ್ 19 ಪಾಸಿಟಿವ್ ಬಂದವರ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಹಾಗು ಕೋವಿಡ್ ಡೆತ್ ಆಡಿಟ್ ಮಾಡಿ ಕಾಲಕಾಲಕ್ಕೆ ಆರೋಗ್ಯ ಇಲಾಖೆ ಆಯುಕ್ತರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೋವಿಡ್ ನಿರ್ವಹಣೆ ಕುರಿತು ಕ್ಯಾಬಿನೆಟ್ ಉಪಸಮಿತಿಯ ಮೊದಲ ಸಭೆಯ ನಡಾವಳಿಗಳಂತೆ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಓಮಿಕ್ರಾನ್ ಸಬ್‌ವೇರಿಯಂಟ್ ಜೆಎನ್.1 ರಾಜ್ಯದಲ್ಲಿ ವರದಿಯಾಗಿರುವುದರಿಂದ ಮುಂದಿನ ಹಂತದ ನಿರ್ದೇಶಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೋವಿಡ್ ಮೊದಲೇ ಪತ್ತೆ ಹಚ್ಚಲು ಮತ್ತು ರೋಗಿಗೆ ಆರಂಭಿಕ ಚಿಕಿತ್ಸೆಯನ್ನು ಪ್ರಾರಂಭಿಸಲು ಪರೀಕ್ಷೆ ಆಧಾರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ನೀಡಲಾದ ಉದ್ದೇಶಿತ ಪರೀಕ್ಷಾ ಮಾನದಂಡಗಳ ಜೊತೆಗೆ, ಎಲ್ಲಾ ರೋಗಲಕ್ಷಣದ ನಿಕಟ ಸಂಪರ್ಕಗಳನ್ನು ಸಹ ಕೋವಿಡ್‌ಗಾಗಿ ಪರೀಕ್ಷಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಜೆಎನ್.1 ಉಪತಳಿಯು ಹೆಚ್ಚು ಹರಡುವಿಕೆಯ ಸಾಮರ್ಥ್ಯ ಹೊಂದಿದೆ. ಪರಿಣಾಮವಾಗಿ ವೃದ್ಧರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ. ಪ್ರಸ್ತುತ ರಾಜ್ಯದಲ್ಲಿ, ದಿನಾಂಕ 26-12-2023ರವರೆಗೆ 464 ಸಕ್ರಿಯ ಕೋವಿಡ್ ಪ್ರಕರಣಗಳ ಪೈಕಿ 376 ಪ್ರಕರಣಗಳು ಬೆಂಗಳೂರು ನಗರದಲ್ಲಿ ವರದಿಯಾಗಿವೆ. ಒಟ್ಟು 74 ಖಚಿತ ಕೋವಿಡ್ ಪ್ರಕರಣಗಳಲ್ಲಿ 57 ಪ್ರಕರಣಗಳು ಮತ್ತು 9 ಮರಣ ಪ್ರಕರಣಗಳಲ್ಲಿ 4 ಮರಣ ಪ್ರಕರಣಗಳು, ಬೆಂಗಳೂರು ನಗರಕ್ಕೆ ಸೇರಿವೆ.
ರಾಜ್ಯದಲ್ಲಿ ಈವರೆಗೆ ವರದಿಯಾಗಿರುವ 34 ಜೆಎನ್.1 ಪ್ರಕರಣಗಳ ಪೈಕಿ 21 ಜೆಎನ್.1 ಪ್ರಕರಣಗಳು ಬೆಂಗಳೂರು ನಗರದ್ದಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಮುಂಬರುವ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಜನಸಂದಣಿ ಪ್ರದೇಶಗಳನ್ನು ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಜನಸಂದಣಿಯಾಗುವುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಸಾರ್ವಜನಿಕರು ಮುಂಜಾಗೃತಾ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸುವುದರ ಬಗ್ಗೆ ಅರಿವು ಮೂಡಿಸುವಂತೆ ಇಲಾಖೆ ಸೂಚಿಸಿದೆ.
ಈಗಾಗಲೇ ಸಾರ್ವಜನಿಕರಿಗೆ ಸಲಹಾ ಪತ್ರದಲ್ಲಿ ತಿಳಿಸಿರುವಂತೆ, 60 ವರ್ಷ ಮೇಲ್ಪಟ್ಟವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರವವರು ಮಾಸ್ ಧರಿಸುವುದನ್ನು ಪುನರುಚ್ಛರಿಸಲಾಗಿದೆ. ಈಗಾಗಲೇ ಹೊರಡಿಸಿರುವ ಮಾರ್ಗದರ್ಶಿ ಸುತ್ತೋಲೆಗಳು ಹಾಗೂ ಸಲಹಾ ಪತ್ರದಲ್ಲಿರುವ ಮಾಹಿತಿಯನ್ನು ಎಲ್ಲಾ ಮಾಧ್ಯಮಗಳ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸುವಂತೆ ಸೂಚಿಸಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಅಂಶಗಳ ಪಾಲನೆ ಖಚಿತಪಡಿಸಿಕೊಳ್ಳುವಂತೆ ತಿಳಿಸಿದೆ.
ರಾಜ್ಯದಲ್ಲಿ 400 ಕೋವಿಡ್ ಸೋಂಕಿತರು ಪ್ರಸ್ತುತ ಹೋಮ್ ಐಸೋಲೇಶನ್‌ನಲ್ಲಿದ್ದಾರೆ ಮತ್ತು ಕೆಲವರನ್ನು ಆಸ್ಪತ್ರೆಗಳಲ್ಲಿ ಸಾಮಾನ್ಯ ಪ್ರತ್ಯೇಕ ವಾರ್ಡ್‌ಗಳಲ್ಲಿ ದಾಖಲಿಸಲಾಗಿದೆ. ಇನ್ನು ಮುಂದೆ, ಕೋವಿಡ್ ಸೋಂಕಿತರಾಗಿ ಹೋಮ್ ಐಸೋಲೇಷನ್ ಮತ್ತು ಜನರಲ್ ವಾರ್ಡ್ಗೆ ದಾಖಲಾಗುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ, ನಮ್ಮ ಚಿಕಿತ್ಸಾಲಯಗಳ ವೈದ್ಯರು/ಅರೆವೈದ್ಯಕೀಯ ಸಿಬ್ಬಂದಿಗಳು ಒಮ್ಮೆಯಾದರೂ ಭೇಟಿ ನೀಡಿ ರೋಗಿಯ ವೈದ್ಯಕೀಯ ಸ್ಥಿತಿ ಮತ್ತು ರೋಗಲಕ್ಷಣಗಳನ್ನು ನಿರ್ಣಯಿಸಬೇಕು. ಅಗತ್ಯವಿದ್ದಲ್ಲಿ ಚಿಕಿತ್ಸೆಗಾಗಿ ಮುಂದಿನ ಕ್ರಮಗಳನ್ನು ಸೂಚಿಸಬೇಕು. ತಾಲೂಕುಗಳ ಟಿಎಚ್‌ಒಗಳು ಇದನ್ನು ಮೇಲ್ವಿಚಾರಣೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ, ಇದನ್ನು ವಲಯ ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದೆ.
ಡೆತ್ ಆಡಿಟ್ ಸಮಿತಿ ಕಾಲಕಾಲಕ್ಕೆ ವರದಿ ಸಲ್ಲಿಸಬೇಕು: ಐಸಿಯುಗಳಲ್ಲಿ ದಾಖಲಾದ ಎಲ್ಲಾ ಕೋವಿಡ್ ಸೋಂಕಿತರನ್ನು ಹಿಂದಿನ ಕೋವಿಡ್ ಅಲೆಗಳ ಸಮಯದಲ್ಲಿ ಮಾಡಿದಂತೆ ಟೆಲಿ ಐಸಿಯು ಮೂಲಕ ಮೇಲ್ವಿಚಾರಣೆ ಮಾಡಬೇಕು. ಜಿಲ್ಲಾ ಡೆತ್ ಆಡಿಟ್ ಸಮಿತಿಗಳು ಅಗತ್ಯವಿದ್ದಾಗ ಮತ್ತು ಇಲ್ಲಿಯವರೆಗೆ ಕೋವಿಡ್ ಸಾವುಗಳನ್ನು ಲೆಕ್ಕಪರಿಶೋಧನೆ ಮಾಡುತ್ತಿದ್ದ, ಅದರಂತೆ ರಾಜ್ಯ ಡೆತ್ ಆಡಿಟ್ ಸಮಿತಿಯು ಕೋವಿಡ್ ಸಾವುಗಳನ್ನು ಲೆಕ್ಕಪರಿಶೋಧಿಸುತ್ತಿದೆ. ಈಗ ಕೋವಿಡ್ ಸಾವಿನ ಕುರಿತ ವರದಿಗಳನ್ನು ಕಾಲಕಾಲಕ್ಕೆ ಆರೋಗ್ಯ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಕೆ ಮಾಡಬೇಕು.
ಮುಂಬರುವ ಹೊಸ ವರ್ಷಾಚರಣೆ ಹಾಗು ಹಬ್ಬಗಳ ದೃಷ್ಟಿಯಿಂದ ಜಿಲ್ಲೆಗಳಲ್ಲಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳ್ಳಬೇಕು. ಪ್ರತ್ಯೇಕವಾದ ಕೋವಿಡ್ ವಾರ್ಡ್ ಮತ್ತು ಐಸಿಯು ಬೆಡ್, ಐಸೊಲೇಷನ್ ವಾರ್ಡ್‌ಗಳನ್ನು ಸ್ಥಾಪಿಸಿ ತಾವು ಸಜ್ಜುಗೊಳಿಸುತ್ತವೆ. ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು. ಅನಗತ್ಯವಾಗಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವುದು ಸರಿಯಲ್ಲ. ಇನ್ನು ಮುಂದೆ ಕೋವಿಡ್ ಪರೀಕ್ಷೆಗಾಗಿ ಸಿಟಿ ಥೋರಾಕ್ಸ್ ಸ್ಕ್ಯಾನ್ ಮಾಡಬಾರದು ಎಂದು ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡುವಂತೆ ಇಲಾಖೆ ಹೇಳಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ಹೇಳಿಕೆ: ಕೋವಿಡ್ ನಿರ್ವಹಣಾ ಕಾರ್ಯದಲ್ಲಿ ತೊಡಗುವ ಎಲ್ಲಾ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಫ್ಲೂ ಲಸಿಕೆ ನೀಡಲು ಪ್ರತ್ಯೇಕ ನಿರ್ದೇಶನಗಳನ್ನು ನೀಡಲಾಗುವುದು. ಆದ್ದರಿಂದ ರಾಜ್ಯ/ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಆರೋಗ್ಯ ಇಲಾಖೆ ನೀಡಿರುವ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ಇದರ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಮೇಲ್ವಿಚಾರಣೆ ಮಾಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತದ ಸಾವಿಗೂ ಕೋವಿಡ್ಗೂ ಯಾವುದೇ ಸಂಬಂಧವಿಲ್ಲ; ಐಸಿಎಂಆರ್ ಮಾಜಿ ನಿರ್ದೇಶಕ