ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಸಡಿಲಿಕೆಯಾಗಿದ್ದು, ನಿನ್ನೆಯಿಂದ ಪಾರ್ಕ್ಗಳು ಕೂಡ ತೆರೆದಿವೆ. ಸಾಕಷ್ಟು ನಾಗರಿಕರು ಮುಂಜಾನೆ ವಾಯು ವಿಹಾರ, ಜಾಗಿಂಗ್ಗಾಗಿ ಬೆಳ್ಳಂಬೆಳಗ್ಗೆ ತೆರಳುತ್ತಿದ್ದಾರೆ. ಆದ್ರೆ ನಿನ್ನೆ ಸಂಜೆ ವೇಳೆ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದ್ಯಾವುದೂ ಕೂಡ ಪಾರ್ಕ್ಗಳಲ್ಲಿ ಪಾಲನೆಯಾಗ್ತಿಲ್ಲ.
ಓಪನ್ ಜಿಮ್ ಬಳಕೆ:
ಪ್ರತೀ ಪಾರ್ಕ್ಗಳಲ್ಲಿ ಬಿಬಿಎಂಪಿ ಕಡೆಯಿಂದಲೇ ಓಪನ್ ಜಿಮ್ ಸಲಕರಣೆಗಳನ್ನು ಇಡಲಾಗಿದೆ. ಕೋವಿಡ್ ಇರುವ ಹಿನ್ನೆಲೆ ಪ್ರತಿಯೊಬ್ಬರೂ ಅದನ್ನು ಬಳಕೆ ಮಾಡಿದರೆ ಕೋವಿಡ್ ಹರಡುವ ಸಾಧ್ಯತೆ ಇರುವುದರಿಂದ ಮುಂದಿನ ಆದೇಶದವರೆಗೆ ಬಂದ್ ಮಾಡಲು ಸೂಚಿಸಲಾಗಿದೆ. ಆದರೆ ಬಹುತೇಕ ಪಾರ್ಕ್ಗಳಲ್ಲಿ ಜಿಮ್ ಸಲಕರಣೆಗಳನ್ನು ಬಂದ್ ಮಾಡಿಲ್ಲ. ಹೀಗಾಗಿ ಇಂದು ಬೆಳಗ್ಗೆ ಸಹ ಗಾಯತ್ರಿನಗರದ ಪಾರ್ಕ್ನಲ್ಲಿ ಜನರು ಜಿಮ್ ಸಲಕರಣೆಗಳನ್ನು ಬಳಸಿದರು.
ಪಾರ್ಕ್ನ ಯಾವುದೇ ಸ್ಥಳಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಆದರೆ ಐದಾರು ಮಂದಿ ಗುಂಪು ಸೇರಿ ಮಾತುಕತೆ ನಡೆಸಿದರೂ ಇದನ್ನು ಪರಿಶೀಲಿಸಲು ಪಾರ್ಕ್ಗಳಲ್ಲಿ ಯಾರೂ ಇರುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಕ್ಕಳು ಪಾರ್ಕ್ಗೆ ಬರುವುದನ್ನು ಆದಷ್ಟು ತಡೆಯುವಂತೆ ಹೇಳಿದ್ದರೂ ಪೋಷಕರು ನಿಗಾ ವಹಿಸದ ಕಾರಣ ಚಿಕ್ಕ ಮಕ್ಕಳು ಸಹ ಪಾರ್ಕ್ನ ಆಟಿಕೆ ಸಾಮಾನುಗಳ ಜೊತೆ ಆಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.