ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಲ್ಲದೇ, ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ತುರ್ತಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತೆರೆದ ಆಸ್ಪತ್ರೆ ಸಜ್ಜು ಮಾಡುತ್ತಿದೆ.
250 ಹಾಸಿಗೆಯನ್ನು ಮೊದಲ ಹಂತದಲ್ಲಿ ಸಿದ್ಧಪಡಿಸಲಾಗಿದೆ. ಒಳಾಂಗಣ ಕ್ರೀಡಾಂಗಣದ ನೆಲಕ್ಕೆ ಸಿಂಥೆಟಿಕ್ ಫ್ಲೋರ್ ಮ್ಯಾಟ್, ಗೋಡೆಗಳಿಗೆ ಫೈಬರ್ ಶೀಟ್ಸ್ ಹಾಕಿ ತಯಾರು ಮಾಡಲಾಗುತ್ತಿದೆ. 30 ಕಾರ್ಮಿಕರು ಬಿರುಸಿನ ಕೆಲಸ ಮಾಡುತ್ತಿದ್ದು ಕಬ್ಬಿಣದ ಮಂಚಗಳನ್ನು ಜೋಡಿಸಲಾಗಿದೆ. ಪ್ರತಿ 10 ಹಾಸಿಗೆಗಳಿಗೆ ಒಂದು ಗೋಡೆ ಹಾಕಿ ಕ್ಯೂಬಿಕಲ್ ಮಾಡಲಾಗುತ್ತದೆ. ಆಸ್ಪತ್ರೆಗಳ ಜನರಲ್ ವಾರ್ಡ್ ಹೋಲುವ ವ್ಯವಸ್ಥೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಯಾರಾಗುತ್ತಿದೆ. ದಿನಕ್ಕೆ 500 ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಹಾಸಿಗೆ ಹಾಗೂ ಸೌಕರ್ಯಕ್ಕಾಗಿ ಒಳಾಂಗಣ ಕ್ರೀಡಾಂಗಣವನ್ನು ಚಿಕಿತ್ಸೆಗಾಗಿ ಸಿದ್ಧಪಡಿಸಲಾಗುತ್ತಿದೆ.
ಎಲ್ಲ ಕ್ಯೂಬಿಕಲ್ಗಳಿಗೂ ಫ್ಯಾನ್, ಪ್ರತಿ ರೋಗಿಗೂ ಕಬ್ಬಿಣದ ಮಂಚ - ಹಾಸಿಗೆ ವ್ಯವಸ್ಥೆ ತುರ್ತಾಗಿ ಆಗುತ್ತಿವೆ. ಜೊತೆಗೆ ಮೊಬೈಲ್ ಶೌಚಾಲಯಗಳನ್ನೂ ಹಾಕಲಾಗುತ್ತಿದೆ. ಕ್ರೀಡಾಂಗಣದ ಹೊರ ಆವರಣದಲ್ಲಿ ಗಿಡ ಗಂಟಿ - ಕಳೆ ಬೆಳೆದಿದೆ. ಕಾರ್ಮಿಕರು ಕಳೆ ತೆಗೆದು ಸ್ಥಳವನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಈ ಮೊದಲು ಕಂಠೀರವ ಸ್ಟೇಡಿಯಂನಲ್ಲಿ ಈ ಕೇಂದ್ರ ಆಗಬೇಕಿತ್ತು. ಅಲ್ಲಿನ ಕೆಲ ಕ್ರೀಡಾಪಟುಗಳು ತಾವು ಒಲಿಂಪಿಕ್ ಕ್ರೀಡೆಗಳಿಗೆ ಅಲ್ಲಿ ತರಬೇತಿ ಪಡೆಯುತ್ತಿದ್ದು, ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಬೇರೆಡೆ ಮಾಡಬೇಕೆಂದು ಕೋರಿದ್ದರು.