ಬೆಂಗಳೂರು: ಆಸ್ತಿಗಾಗಿ ಹೆತ್ತ ತಂದೆಯ ಕಣ್ಣುಗಳನ್ನೇ ಕಿತ್ತು ಹಾಕಿದ್ದ ಮಗನಿಗೆ ಇಲ್ಲಿನ ಕೋರ್ಟ್ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತು. 44 ವರ್ಷದ ಅಭಿಷೇಕ್ ಶಿಕ್ಷೆಗೊಳಗಾದ ಅಪರಾಧಿ. ಬನಶಂಕರಿ ಶಾಕಾಂಬರಿ ನಗರದಲ್ಲಿ ಅಪರಾಧಿಯ ತಂದೆ ಪರಮೇಶ್ವರ್ (66) ವಾಸವಾಗಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಭಿಷೇಕ್ ಕೊಲೆ ಯತ್ನ ನಡೆಸಿದ್ದ. 2018ರ ಅಕ್ಟೋಬರ್ನಲ್ಲಿ ಈ ಘಟನೆ ನಡೆದಿತ್ತು.
ಜೆ.ಪಿ.ನಗರ ಪೊಲೀಸರು ಅಭಿಷೇಕ್‌ನನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಅಪರಾಧವೆಸಗಿರುವುದು ಸಾಬೀತಾಗಿದ್ದು ಇದೀಗ ಕೋರ್ಟ್ ದಂಡ ಸಮೇತ ಶಿಕ್ಷೆ ಪ್ರಕಟಿಸಿದೆ. ದಂಡ ಕಟ್ಟಲು ವಿಫಲನಾದರೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಬೇಕು. ದಂಡದ ಮೊತ್ತವನ್ನು ಪ್ರಕರಣದ ಸಂತ್ರಸ್ತ ಪರಮೇಶ್ವರ್ ಅವರಿಗೆ ನೀಡಬೇಕು ಎಂದು ನ್ಯಾ. ಗೋವಿಂದಯ್ಯ ಆದೇಶ ನೀಡಿದ್ದಾರೆ.
ಅಪರಾಧಿ ಅಭಿಷೇಕ್ ಕೃತ್ಯವೆಸಗಿದ ಬಳಿಕ ಪರಾರಿಯಾಗಿದ್ದ. ಜೆ.ಪಿ. ನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳಹಿಸಿದ್ದರು. ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕೋರ್ಟ್ ಸೂಚನೆ ಮೇರೆಗೆ ಆತನನ್ನು ಮತ್ತೆ ಬಂಧಿಸಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ: ಹುಣಸೆ ಮರ ಕಸದ ವಿಚಾರಕ್ಕೆ ವ್ಯಕ್ತಿ ಕೊಲೆ, ನಾಲ್ವರಿಗೆ ಜೀವಾವಧಿ ಸಜೆ
ಪ್ರತ್ಯೇಕ ಪ್ರಕರಣ- ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ: ವಕೀಲ ಕೇಶವಮೂರ್ತಿ ಪುತ್ರ ವಕೀಲ ಅಮಿತ್ ಕೇಶವಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಅಪರಾಧಿ ರಾಜೇಶ್ ಗೌಡ ಎಂಬವನಿಗೆ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆರೋಪಿಯನ್ನು ದೋಷಿ ಎಂದು ತೀರ್ಪಿತ್ತ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಶಿಕ್ಷೆ ಪ್ರಕಟಿಸಿದ್ದರು.
ಭಾರತೀಯ ದಂಡ ಸಂಹಿತೆ 1860ರ ಕಲಂ 302ರ ಅಡಿಯಲ್ಲಿ ಜೀವಾವಧಿ ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಕಲಂ 30ರ ಅಡಿ 4 ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ಹಾಕಲಾಗಿದೆ. ಜೊತೆಗೆ 1 ಲಕ್ಷ ರೂ. ದಂಡ ಪಾವತಿಸಲು ತಪ್ಪಿದರೆ, 1 ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದರು.