ಬೆಂಗಳೂರು: ಹಣ ಪಡೆದು ಮೋಸ ಮಾಡುತ್ತಿದ್ದ ಯುವರಾಜ್ ವಂಚನೆ ಪ್ರಕರಣ ಸಂಬಂಧ ಯುವರಾಜ್ ಅಕ್ರಮವಾಗಿ ಸಂಪಾದನೆ ಮಾಡಿದ ಆಸ್ತಿ ಮುಟ್ಟುಗೋಲು ಹಾಕುವಂತೆ 67ನೇ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ದೊಡ್ಡ ದೊಡ್ಡ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪ ಹಿನ್ನೆಲೆ ಸಿಸಿಬಿ ಯುವರಾಜ್ನನ್ನು ಬಂಧಿಸಿತ್ತು. ಬೆಂಗಳೂರು, ಮಂಡ್ಯ, ಮದ್ದೂರಿನಲ್ಲಿ 26 ಆಸ್ತಿಗಳ ಮಾಹಿತಿ ಸಂಗ್ರಹಿಸಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಅಫಿಡವಿಡ್ ಸಲ್ಲಿಕೆಯಾಗಿತ್ತು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ ನ್ಯಾ. ಕ್ಯಾತ್ಯಾಯಿನಿ, ಯುವರಾಜ್ ಹಾಗೂ ಪತ್ನಿ ಪ್ರೇಮಾ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ್ದಾರೆ.
ಈ ಬಗ್ಗೆ ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಮಾತನಾಡಿ, ಬಹುತೇಕ ಎಲ್ಲಾ ಆಸ್ತಿಗಳನ್ನು ಯುವರಾಜ್ ತನ್ನ ಪತ್ನಿ ಹೆಸರಿನಲ್ಲಿ ಗಳಿಸಿದ್ದಾರೆ. ಸಾರ್ವಜನಿಕರಿಗೆ, ಸರ್ಕಾರಕ್ಕೆ ವಂಚಿಸಿ ಆಸ್ತಿ ಸಂಪಾದನೆ ಮಾಡಿರುವ ಆಸ್ತಿಗಳು ಇವಾಗಿವೆ. ಯಾವುದೇ ಸಂಪಾದನೆ ಇಲ್ಲದಿದ್ದರೂ ಅಕ್ರಮವಾಗಿ ಹಣ ಗಳಿಸಿ ಆಸ್ತಿ ಮಾಡಿದ್ದಾನೆ. ಹೈಗ್ರೌಂಡ್ಸ್ ಠಾಣೆ, ವೈಯಾಲಿಕಾವಲ್ ಠಾಣೆ, ಉಪ್ಪಾರಪೇಟೆ ಠಾಣೆ, ಸದಾಶಿವನಗರ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ 14 ಪ್ರಕರಣಗಳಲ್ಲಿ ಬೇರೆ ಬೇರೆ ಆಮಿಷವೊಡ್ಡಿ ಅಕ್ರಮವಾಗಿ ಹಣವನ್ನು ಪಡೆದಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: ಕಾಂಗ್ರೆಸ್ ಆರೋಪಕ್ಕೆ ಡಿಸಿಎಂ ಸವದಿ ತಿರುಗೇಟು