ಬೆಂಗಳೂರು: ಖ್ಯಾತ ವೈದ್ಯ ಡಾ.ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಎಕ್ಸ್ ಕಾರ್ಪ್ಗೆ (ಹಿಂದಿನ ಟ್ವಿಟರ್) ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಹಿಮಾಲಯ ವೆಲ್ನೆಸ್ ಕಂಪನಿ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿರುವ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಅವರು ಈ ಆದೇಶ ನೀಡಿದ್ದಾರೆ. ಕಂಪನಿ ಮಂಡಿಸಿರುವ ವಾಸ್ತವಿಕ ಅಂಶಗಳು ಮತ್ತು ಹಲವು ನ್ಯಾಯಾಲಯಗಳು ನೀಡಿರುವ ತೀರ್ಪಿನ ಪ್ರಕಾರ, ಫಿಲಿಪ್ಸ್ ಅವರಿಗೆ ನೊಟೀಸ್ ಜಾರಿ ಮಾಡುವುದಕ್ಕೂ ಮುನ್ನ ಅವರ ವಿರುದ್ಧ ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಕೋರ್ಟ್ ತಿಳಿಸಿದೆ.
ಕಂಪನಿಯ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಫಿಲಿಪ್ಸ್ ಅವರನ್ನು ನಿರ್ಬಂಧಿಸಬೇಕು ಮತ್ತು ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಎಕ್ಸ್ ಕಾರ್ಪ್ಗೆ ಆದೇಶಿಸಬೇಕು ಅಂತಾ ಕಂಪನಿಯು ಕೋರಿತ್ತು. ಇದನ್ನು ನ್ಯಾಯಾಲಯವು ಪುರಸ್ಕರಿಸಿದೆ.
ಇದನ್ನೂ ಓದಿ : ಅಪಘಾತದಲ್ಲಿ ಏರ್ಬ್ಯಾಗ್ ತೆರೆಯದೇ ವೈದ್ಯ ಸಾವು : ಆನಂದ್ ಮಹೀಂದ್ರಾ ಸೇರಿ 13 ಜನರ ಮೇಲೆ ಕೇಸ್ ದಾಖಲಿಸಿದ ವ್ಯಕ್ತಿ
ವಿಚಾರಣೆ ವೇಳೆ ಹಿಮಾಲಯ ವೆಲ್ನೆಸ್ ಕಂಪನಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಫಿಲಿಪ್ಸ್ ಅವರ ಸಾಮಾಜಿಕ ಜಾಲತಾಣದಲ್ಲಿ ಕಂಪನಿಯ ವಿರುದ್ಧ ಆಕ್ಷೇಪಾರ್ಹವಾದ ಹೇಳಿಕೆ ಮತ್ತು ದಾಖಲೆ ಹಂಚಿಕೊಂಡಿರುವುದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಕಂಪನಿಯ ವಿರುದ್ಧ ಆಕ್ಷೇಪಾರ್ಹವಾದ ಮಾಹಿತಿ ಹಂಚಿಕೊಳ್ಳುವ ಮೂಲಕ ಫಿಲಿಪ್ಸ್ ಅವರು ಸಿಪ್ಲಾ ಮತ್ತು ಅಲ್ಚೆಮ್ ಉತ್ಪನ್ನಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಾದಿಸಿದರು. ಬಳಿಕ, ಫಿಲಿಪ್ಸ್ ಅವರ ಎಕ್ಸ್ ಕಾರ್ಪ್ ಖಾತೆಯನ್ನು ಮುಂದಿನ ವಿಚಾರಣೆಯವರೆಗೆ ಅಂದರೆ 2024ರ ಜನವರಿ 1ರ ವರೆಗೆ ನಿರ್ಬಂಧಿಸಿ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ ವೈದ್ಯ.. ಎಲ್ಲಿದೆ ಗೊತ್ತಾ ಆ ಕ್ಲಿನಿಕ್ !
ಡಾ. ಫಿಲಿಪ್ಸ್ ಅವರು ಯಕೃತ್ ವೈದ್ಯ (ಹೆಪಟೋಲೋಜಿಸ್ಟ್) ಮತ್ತು ಕ್ಲಿನಿಷಿಯನ್ ವಿಜ್ಞಾನಿಯಾಗಿದ್ದಾರೆ.
ಇದನ್ನೂ ಓದಿ : ಭಾರಿ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್.. ಈ ಬಾರಿ 6000 ಉದ್ಯೋಗಗಳು ವಜಾ