ಬೆಂಗಳೂರು: ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಗಿ ಶಾಸಕ ಬಿ. ನಾಗೇಂದ್ರ ಸೇರಿ 8 ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ನೀಡಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 8 ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶಿಸಿದೆ.
ಈಗಲ್ ಟ್ರೇಡರ್ಸ್ ಮತ್ತು ಲಾಜಿಸ್ಟಿಕ್ಸ್ ಪಾಲುದಾರ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಹಾಗೂ ಉದ್ಯಮಿ ಕೆ.ನಾಗರಾಜು, ಆರ್ಯನ್ ಮಿನರಲ್ಸ್‌ನ ಪಾಲುದಾರ ಸಂತೋಷ್ ರಾಜಾಪುರ, ಶ್ರೀ ದುರ್ಗಾ ಟ್ರೇಡ್ ಮತ್ತು ಲಾಜಿಸ್ಟಿಕ್ಸ್ ಆಡಳಿತಾಧಿಕಾರಿ ಚಂದ್ರಕಾಂತ್ ಕಾಮತ್, ಶ್ರೀನಿವಾಸ ಎಂಟರ್‌ಪ್ರೈಸಸ್‌ನ ಮಾಲೀಕ ಬಿ.ರಾಜಕುಮಾರ್, ನಂದಿ ಎಂಟರ್‌ಪ್ರೈಸಸ್ ಮಾಲೀಕ ಡಿ ಸುರೇಶ್, ಪದ್ಮಾವತಿ ಕಮರ್ಷಿಯಲ್ಸ್‌ನ ಆಡಳಿತಾಧಿಕಾರಿ ಬಿ ಆರ್ ಗುರುರಾಜ್, ಜೈಸಿಂಗಾಪುರ ಸರ್ವೆ ನಂ.79ರ ವಲಯದ ಆಡಳಿತಾಧಿಕಾರಿ ನಂದಕುಮಾರ್ ಸಿಂಗ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಸೂಚಿಸಿದ್ದು, ಇವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರಕರಣದ ಹಿನ್ನೆಲೆ: 2006ರ ಏ.1ರಿಂದ 2010ರ ಡಿ.31ರ ಅವಧಿಯಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯದೇ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಒಟ್ಟು 13.366 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಿಂದ ಕಾರವಾರ ಬಂದರಿಗೆ ಅಕ್ರಮವಾಗಿ ಸಾಗಿಸಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗಿತ್ತು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಹಸುಗಳ್ಳತನ ಮಾಡುತ್ತಿದ್ದ ಖದೀಮರನ್ನು ಥಳಿಸಿ, ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು