ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಯ 198 ವಾರ್ಡ್‌ಗಳ ಮರುವಿಂಗಡಣೆ ಮತ್ತು ವಾರ್ಡ್ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಬಿಬಿಎಂಪಿಯ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಕ್ಷೇತ್ರ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದ್ದು, ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ವಾದ ಮಂಡಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು, 2015ರ ಆ.25ರಂದು ಬಿಬಿಎಂಪಿ ಚುನಾವಣೆ ನಡೆದು, ಸೆ.11ರಂದು ಪಾಲಿಕೆ ರಚನೆ ಆಗಿತ್ತು. ಅದರಂತೆ, 2020ರ ಸೆ.10ಕ್ಕೆ ಹಾಲಿ ಚುನಾಯಿತ ಸದಸ್ಯರ ಅವಧಿ ಮುಗಿಯಲಿದ್ದು, ಅಷ್ಟರೊಳಗೆ ಚುನಾವಣೆ ನಡೆಸಬೇಕು. ಅವಧಿ ಮುಗಿಯುವ ವರ್ಷಕ್ಕೆ ಮೊದಲು ಸರ್ಕಾರ, ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲು ನಿಗದಿಪಡಿಸಬೇಕು. ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.