ಬೆಂಗಳೂರು : ಮಹಿಳೆಯ ರಕ್ಷಣೆ ಮತ್ತು ಮಾನ ಕಾಪಾಡುವಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಮಹಾಭಾರತದಲ್ಲಿ ಧರ್ಮ ಕಾಪಾಡಿದ ಕೃಷ್ಣನಂತೆ ವರ್ತಿಸಬೇಕು ಎಂದು ಅತ್ಯಾಚಾರ ಪ್ರಕರಣವೊಂದರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
69 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯಿಂದ ಬಿಡುಗಡೆ ಕೋರಿ ಚಿಂತಾಮಣೆಯ ನಾಗೇಶ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿರುವ ನ್ಯಾ. ಬಿ ವೀರಪ್ಪ ಹಾಗೂ ನ್ಯಾ. ಎಸ್. ಇ. ಇಂದಿರೇಶ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 74 ವರ್ಷ ಕಳೆದಿದ್ದರೂ ಮಹಿಳೆಯರ ಮೇಲೆ ನಡೆಯುತ್ತಿರುವ ಕೌರ್ಯ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲೂ ನ್ಯಾಯಾಲಯಗಳು ಮೂಖ ಪ್ರೇಕ್ಷಕನಂತೆ ನೋಡುತ್ತಾ ಕೂರುವುದು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯ ಘನತೆ ಮತ್ತು ಸುರಕ್ಷತೆ ಕಾಪಾಡಲು ನ್ಯಾಯಾಲಯಗಳು ಮಹಾಭಾರತದಲ್ಲಿ ಧರ್ಮ ಕಾಪಾಡಲು ಮುಂದಾದ ಕೃಷ್ಣನಂತೆ ವರ್ತಿಸಬೇಕು ಎಂದಿರುವ ಪೀಠ, ಭಗವದ್ಗೀತೆಯ ನಾಲ್ಕನೇ ಅಧ್ಯಾಯದ 7-8ನೇ ಪದ್ಯವನ್ನು ಉಲ್ಲೇಖಿಸಿದೆ. ಅಲ್ಲದೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹಿಂಜರಿಯಬಾರದು ಎಂದಿರುವ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ಪ್ರಕರಣದ ಹಿನ್ನೆಲೆ : ಚಿಕ್ಕಬಳ್ಳಾಪುರ ಮೂಲದ 25 ವರ್ಷದ ಆರೋಪಿ ನಾಗೇಶ್ ಮಂಗಳೂರಿನಲ್ಲಿ ವಾಸವಿದ್ದ ಸಂದರ್ಭದಲ್ಲಿ ಪರಿಚತವಿದ್ದ 69 ವರ್ಷದ ವೃದ್ಧೆ ಮೇಲೆ 2013ರಲ್ಲಿ ಅತ್ಯಾಚಾರ ಎಸಗಿದ್ದನು. ಚಾಕುವಿನಿಂದ ಬೆದರಿಸಿ ವೃದ್ಧೆಯ ಮೈಮೇಲಿದ್ದ ಒಡವೆ ಹಾಗೂ ಮನೆಯಲ್ಲಿದ್ದ 5 ಸಾವಿರ ಹಣ ದರೋಡೆ ಮಾಡಿದ್ದನು. ಇದರ ಜತೆಗೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದನು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗೆ ದಕ್ಷಿಣ ಕನ್ನಡದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2014ರ ನವೆಂಬರ್ 11ರಂದು 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಆರೋಪಿ ನಾಗೇಶ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದನು.