ಬೆಂಗಳೂರು : ಚಿಕ್ಕೋಡಿ ಉಪಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬೆಳಗಾವಿಯ ಸದಲಗಾ ಠಾಣೆ ಪೊಲೀಸರು ದಾಖಲಿಸಿದ್ದ ಪ್ರಕರಣದಿಂದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ನಟಿ ತಾರಾ ಅವರನ್ನು ಖುಲಾಸೆಗೊಳಿಸಿ ನಗರದ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಹಾಗೂ ಸಾಕ್ಷಿಗಳು ಪ್ರತಿಕೂಲ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಆರೋಪಿತರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗುತ್ತಿದೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರೀತ್ .ಜೆ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2014ರಲ್ಲಿ ಚಿಕ್ಕೋಡಿ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ನಟಿ ತಾರಾ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಪ್ರಚಾರ ಮಾಡಿದ್ದರು. 2014 ರ ಆಗಸ್ಟ್ 13 ರಂದು ರಾತ್ರಿ 10.30 ರಿಂದ ಗಂಟೆವರೆಗೆ ಸದಲಗಾ ಪಟ್ಟಣದ ಜೈನ್ ಕನ್ವೆನ್ಷನ್ ಹಾಲ್ನಲ್ಲಿ ಸಭೆ ನಡೆಸಿದ್ದರು.
ಈ ಕುರಿತು ಸುದ್ದಿವಾಹಿನಿ ವರದಿ ಪ್ರಸಾರ ಮಾಡಿತ್ತು. ಬಳಿಕ ಹನುಮೇಶಪ್ಪ ಎಂಬುವವರು 14ರಂದು ಸದಲಗಾ ಪೊಲೀಸ್ ಠಾಣೆಗೆ ತೆರಳಿ ಚುನಾವಣೆ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ರಾತ್ರಿ ವೇಳೆ ಕಿರಿಕಿರಿಯಾಗುವಂತೆ ಧ್ವನಿವರ್ದಕಗಳನ್ನು ಬಳಸಲಾಗಿದೆ. ಮತದಾರರಿಗೆ ಆಮಿಷ ಒಡ್ಡಲಾಗಿದೆ ಎಂದು ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ನಟಿ ತಾರಾ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ಐಪಿಸಿ ಸೆಕ್ಷನ್ 171(ಇ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 123 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಸ್ಫೋಟ : ಒಂದೇ ದಿನ 566 ಮಂದಿಗೆ ಸೋಂಕು ದೃಢ