ಬೆಂಗಳೂರು : ಕೊರೊನಾ ಸೋಂಕು ತೀವ್ರ ವ್ಯಾಪಿಸುತ್ತಿರೋ ಸ್ಥಿತಿಯಲ್ಲಿ ಕೋರ್ಟ್‌ಗಳನ್ನು ಪುನಾರಂಭಿಸುವುದು ಕಷ್ಟ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಹೇಳಿದ್ದಾರೆ.
ವಕೀಲರು ಮತ್ತು ವಕೀಲರ ಗುಮಾಸ್ತರಿಗೆ ನೆರವು ಕಲ್ಪಿಸುವ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸಿಜೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೈಕೋರ್ಟ್‌ನ ಸುಮಾರು 45 ಸಿಬ್ಬಂದಿಗೆ ಸೋಂಕು ತಗುಲಿದೆ. ಮತ್ತಷ್ಟು ಸಿಬ್ಬಂದಿ ಪರೀಕ್ಷೆಗೊಳಪಟ್ಟಿದ್ದು, ಅವರ ವರದಿ ಇನ್ನೂ ಲಭ್ಯವಾಗಬೇಕಿದೆ. ಹಲವು ನ್ಯಾಯಾಂಗ ಅಧಿಕಾರಿಗಳಿಗೂ ಕೊರೊನಾ ಸೋಂಕಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸದ್ಯಕ್ಕಂತೂ ರಾಜ್ಯದ ಕೋರ್ಟ್‌ಗಳನ್ನು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ನಡೆಸುವುದು ಕಷ್ಟ ಎಂದಿದ್ದಾರೆ.
ಲಾಕ್‌ಡೌನ್ ಆರಂಭವಾದಾಗಿನಿಂದ ಈವರೆಗೂ ವಕೀಲರು ಮತ್ತು ಗುಮಾಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಇಲ್ಲದಂತಾಗಿದೆ. ಹೀಗಾಗಿ ವಕೀಲರು ಮತ್ತು ಗುಮಾಸ್ತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಕೀಲರು ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಆರಂಭಿಸಲು ಮನವಿ ಮಾಡಿದ್ದಾರೆ. ಆದರೆ, ಪರಿಸ್ಥಿತಿ ಪ್ರತಿಕೂಲವಾಗಿದೆ. ರಾಜ್ಯ ಸರ್ಕಾರ ವಕೀಲರಿಗೆ ಸ್ವಲ್ಪ ಮಟ್ಟಿಗೆ ಆರ್ಥಿಕ ನೆರವು ನೀಡಿದೆ. ಹಾಗೆಯೇ ವಕೀಲರ ಗುಮಾಸ್ತರಿಗೂ ನೆರವು ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಕೋರ್ಟ್ ಕೆಲಸವನ್ನೇ ನಂಬಿರುವ ವಕೀಲರು ಮತ್ತು ಗುಮಾಸ್ತರ ಜೀವನ ಮತ್ತಷ್ಟು ದುಸ್ತರವಾಗಲಿದೆ ಎಂದು ಸಿಜೆ ಅಭಿಪ್ರಾಯಪಟ್ಟಿದ್ದಾರೆ.