ಬೆಂಗಳೂರು: ಮಾಜಿ ಶಾಸಕರ ಕುಟುಂಬದ ಆಪ್ತರು ಎಂದು ಹೇಳಿಕೊಂಡು ಹತ್ತಾರು ಜನರಿಗೆ ದಂಪತಿಯು ವಂಚನೆ ಎಸಗಿದ್ದಾರೆ ಎಂದು ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.
ಬಸವನಗುಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ಶ್ರೀದೇವಿ ಈಕೆಯ ಗಂಡ ಸದಾಶಿವ ಎಂಬುವವರು ವಂಚನೆ ಎಸಗಿದ್ದಾರೆ ಎಂಬ ಆರೋಪದಡಿ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿ ಕೊಂಡಿದ್ದು, ಸದ್ಯ ದಂಪತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ: ಮಾಜಿ ಶಾಸಕರಾದ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ನನಗೆ ಪರಿಚಯಸ್ಥರು ಎಂದು ಹೇಳಿಕೊಂಡು ಶ್ರೀದೇವಿ ಹಾಗೂ ಸದಾಶಿವ ಸಾರ್ವಜನಿಕರ ಬಳಿ ಲಕ್ಷಾಂತರ ಸಾಲ ಪಡೆದಿದ್ದರು. ಅದಲ್ಲದೆ, 30 ವರ್ಷಗಳಿಂದ ಪರಚಿತರಾಗಿದ್ದ ಮಮತಾ ದೇವರಾಜ್ ಬಳಿಯೂ ಮಗಳ ಮದುವೆ, ಅನಾರೋಗ್ಯ ವಿಚಾರ ಹೀಗೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ 85 ಲಕ್ಷ ರೂ. ಹಾಗೂ 40 ಲಕ್ಷ ರೂ.ಮೌಲ್ಯದ ಒಡವೆ ಪಡೆದುಕೊಂಡಿದ್ದಾರೆ. ನೀಡಿದ ಸಾಲ ವಾಪಸ್ ಕೇಳಿದಾಗ ಆರೋಪಿ ಸದಾಶಿವ್ ಎರಡು ನಕಲಿ ಚೆಕ್ ನೀಡಿ ವಂಚಿಸಿದ್ದಾನೆ. ಹಣ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಮಮತಾ ದೇವರಾಜ್ ಆರೋಪಿಸಿದ್ದಾರೆ.