ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಅಪಾರ ಮೌಲ್ಯದ ಬಟ್ಟೆ ಖರೀದಿಸಿದ ನಕಲಿ ದಂಪತಿ ಬಿಲ್ ನೀಡುವಾಗ ಎಟಿಎಂ ಕಾರ್ಡ್ ಮರೆತು ಬಂದಿರುವುದಾಗಿ ಮಾಲೀಕರಿಗೆ ಸುಳ್ಳು ಹೇಳಿ ಯಾಮಾರಿಸಿದ್ದರು. ಹೀಗೆ, ಪರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: ಡಿಸೆಂಬರ್ 8ರಂದು ಗಿರಿನಗರದಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಕಾರಿನಲ್ಲಿ ಮಗುವಿನೊಂದಿಗೆ ಬಂದಿದ್ದ ಆರೋಪಿಗಳಾದ ಅಜಿತ್ ಹಾಗೂ ಗೀತಾಂಜಲಿ ತಮ್ಮ ಮನೆಯಲ್ಲಿ ಕಾರ್ಯಕ್ರಮವಿದ್ದು ಹೊಸ ಹೊಸ ಡಿಸೈನ್‌ಗಳಿರುವ ಬಟ್ಟೆ ತೋರಿಸುವಂತೆ ಹೇಳಿದ್ದಾರೆ. ನಂತರ ತಮಗೆ ಬೇಕಾದ ಬಟ್ಟೆಯನ್ನು ಖರೀದಿಸಿ ಕ್ಯಾಷ್ ಕೌಂಟರ್‌ಗೆ ಬಂದು 1.21 ಲಕ್ಷ ರೂಪಾಯಿ ಬಿಲ್ ಗಮನಿಸಿದ್ದಾರೆ.
ಈ ವೇಳೆ ಅಸಲಿ ವರಸೆ ಪ್ರದರ್ಶಿಸಿದ ಅಜಿತ್, ಮನೆಯಲ್ಲಿ ಎಟಿಎಂ ಕಾರ್ಡ್ ಬಿಟ್ಟು ಬಂದಿದ್ದೇನೆ. ಮಗುವಿಗೆ ವಾಕ್ಸಿನೇಷನ್ ಆಗಿ ಆಸ್ಪತ್ರೆಗೆ ಬಂದಿದ್ದೆವು. ಮನೆಗೆ ಹೋಗಿ ಎಟಿಎಂ ಕಾರ್ಡ್ ತೆಗೆದುಕೊಂಡು ಬರುವೆ. ಅಲ್ಲಿಯವರೆಗೆ ಹೆಂಡತಿ ಅಂಗಡಿಯಲ್ಲಿ ಇರಲಿದ್ದಾರೆ ಎಂದು ಹೇಳಿ ಖರೀದಿಸಿದ ಬಟ್ಟೆಯೊಂದಿಗೆ ಕಾಲ್ಕಿತ್ತಿದ್ದಾನೆ. ಮಗುವಿನೊಂದಿಗೆ ಬಂದಿದ್ದರಿಂದ ಅಸಲಿ ಗ್ರಾಹಕರೆಂದು ಎಂದು ಮಾಲೀಕರು ನಂಬಿದ್ದರು.
ಈ ಮಧ್ಯೆ ವಂಚಕಿ ಗೀತಾಂಜಲಿ ಇನ್ನಷ್ಟು ಹೊಸ ಬಟ್ಟೆ ಖರೀದಿಸಿದ್ದಳು. ಕೆಲ ಹೊತ್ತಿನ ಬಳಿಕ ಅಜಿತ್ ಬೈಕ್‌ನೊಂದಿಗೆ ಅಂಗಡಿ ಸಮೀಪ ಬಂದು ಗೀತಾಂಜಲಿಗೆ ಫೋನ್ ಮಾಡಿದ್ದಾನೆ. ಮೊಬೈಲ್‌ನಲ್ಲಿ ಮಾತನಾಡುವ ಸೋಗಿನಲ್ಲಿ ಅನುಮಾನ ಬಾರದಿರಲು ಧರಿಸಿದ್ದ ಚಪ್ಪಲಿ ಅಂಗಡಿಯಲ್ಲೇ ಬಿಟ್ಟು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾಳೆ. ಈ ಸಂಬಂಧ ನೀಡಿದ ದೂರು ಆಧರಿಸಿ ಗಿರಿನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆ ನಡೆಸಿ ನಕಲಿ ದಂಪತಿಯನ್ನು ಬಂಧಿಸಿದ್ದಾರೆ.
ಅಜಿತ್ ಹಾಗೂ ಗೀತಾಂಜಲಿ ಪರಸ್ಪರ ಸಂಬಂಧಿಕರಾಗಿದ್ದಾರೆ. ಕೆಲ ದಿನಗಳ ಹಿಂದೆ ಮದ್ದೂರಿನ ಅಂಗಡಿಯೊಂದಕ್ಕೆ ತೆರಳಿದ ವಂಚಕರು 4 ಸಾವಿರ ಬೆಲೆಯ ಏಳು ಜೊತೆ ಚಪ್ಪಲಿಯನ್ನು ಖರೀದಿಸಿ, ಮೋಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಲ್ಲದ ದಂಪತಿಗಳೇ ಈ ನಕಲಿ ವೈದ್ಯ ದಂಪತಿಗಳ ಟಾರ್ಗೆಟ್: ಔಷಧ ತಿಂದವರ ಆರೋಗ್ಯ ಸ್ಥಿತಿ ಗಂಭೀರ!