ಬೆಂಗಳೂರು: ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ವಾಷ್ ರೂಂನಲ್ಲಿ ಶವ ಪತ್ತೆಯಾಗಿದ್ದು, ಈ ಸಂಬಂಧ ಪೀಣ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನುಮಂತರಾಯ (42), ಹೊನ್ನಮ್ಮ (34) ಮೃತ ದಂಪತಿ. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರದವರು. ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ಬೃಂದಾವನ ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಹನುಮಂತರಾಯ ಸೆಕ್ಯೂರಿಟಿ ಗಾರ್ಡ್ ಆಗಿ, ಪತ್ನಿ ಹೊನ್ನಮ್ಮ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ದಂಪತಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದರು. ಎಂದಿನಂತೆ ಗುರುವಾರ ಕಚೇರಿಗೆ ಬಂದ ಸಿಬ್ಬಂದಿ ಬಾಗಿಲು ತೆಗೆಯದೆ ಇದ್ದಾಗ ಅನುಮಾನಗೊಂಡು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿದಾಗ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಗೊತ್ತಾಗಿದೆ.
ಇಬ್ಬರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಘಟನೆ ನಡೆದಿದೆ. ಮೃತ ದಂಪತಿ ಇಲ್ಲಿಯೇ ಸೆಕ್ಯುರಿಟಿ ಗಾರ್ಡ್ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡ್ತಿದ್ದರು. ಇಬ್ಬರನ್ನು ಕಚೇರಿಯ ಹಾಲ್ನಲ್ಲಿ ಕೊಲೆಗೈದು, ಕೆಎಎಸ್ ಅಧಿಕಾರಿ ಚೇಂಬರ್ನ ವಾಷ್ ರೂಂನಲ್ಲಿ ಮೃತದೇಹಗಳನ್ನು ಬಿಸಾಡಿದ್ದಾರೆ. ಮೃತರ ತಲೆಗಳಿಗೆ ಬಲವಾದ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಬೆಳಗ್ಗೆ ಸೋಂಕಿತನ ಪತ್ನಿ ಪ್ರತಿಭಟನೆ: ಸಿಎಂ ನಿವಾಸದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ!