ಬೆಂಗಳೂರು: ನಗರದಲ್ಲಿ ಹಾಡಹಗಲೇ ವೃದ್ಧೆಯ ಕತ್ತು ಸೀಳಿ ಕೊಂದು, ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಹಂತಕರ ಬಂಧನ ಮಾಡುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ರಾಯಚೂರಿನ ವಿರೇಶ್, ಪತ್ನಿ ಚೈತ್ರಾ, ಸಹಾಯ ಮಾಡಿದ ಪ್ರಶಾಂತ್ ಬಂಧಿತ ಆರೋಪಿಗಳು. ಕಾಡುಗೋಡಿ ಸಮೀಪದ ಚನ್ನಸಂದ್ರದ ಕಲ್ಲಪ್ಪ ಲೇಔಟ್ ಬಳಿ ಆಗಸ್ಟ್ 12ರಂದು ಬೆಳಗ್ಗೆ 10 ಗಂಟೆ ವೇಳೆಗೆ 65 ವರ್ಷದ ಮನೆ ಮಾಲೀಕಿ ಜಯಮ್ಮ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಹಾಗೆಯೇ ಹತ್ಯೆ ಬಳಿಕ ಮನೆಯಲ್ಲಿದ್ದ 45 ಲಕ್ಷ ಹಣ, 88 ಗ್ರಾಂ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು .
ಹಾಡಹಗಲೇ ಕೊಲೆಯಾದ ಕಾರಣ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಇಳಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಬಂಧಿತ ಆರೋಪಿಗಳು ಕಳೆದ ಎರಡು ವರ್ಷಗಳಿಂದ ವೃದ್ಧೆ ಮನೆಯಲ್ಲಿ ಬಾಡಿಗೆಗಿದ್ದರು. ಇನ್ನು ಕೊರೊನಾದಿಂದ ಹೇರಿದ್ದ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಜಯಮ್ಮ ಬಳಿ ಹಣಕಾಸು ಇದ್ದ ಕಾರಣ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.