ಬೆಂಗಳೂರು: ಕೊರೊನಾ ವೈರಸ್ ನೀಡಿದ ಹೊಡೆತಕ್ಕೆ ವಿಮಾನಯಾನ ಸೇವೆಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಲಾಕ್ಡೌನ್ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಲೋಹದ ಹಕ್ಕಿಗಳ ಹಾರಾಟಕ್ಕೆ ಮೇ ತಿಂಗಳ ಅಂತ್ಯದಲ್ಲಿ ಅನುಮತಿ ಸಿಕ್ಕರೂ ಕೋವಿಡ್ ಭೀತಿಯಿಂದಾಗಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ ಅಷ್ಟಕಷ್ಟೆ. ಸದ್ಯ ವಿಮಾನಯಾನ ಸೇವೆ ಚೇತರಿಕೆ ಕಾಣುತ್ತಿದ್ದು, ಬಿಕೋ ಎನ್ನುತ್ತಿದ್ದ ವಿಮಾನ ನಿಲ್ದಾಣಗಳು ಮೊದಲಿನ ಸ್ಥಿತಿಯತ್ತ ಮರಳುತ್ತಿವೆ.
ಇನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಶೇ.47ರಷ್ಟು ಪ್ರಗತಿ ಕಂಡಿದ್ದು, ನೂರು ದಿನಗಳ ನಂತರ 1.4 ದಶಲಕ್ಷ ಪ್ರಯಾಣಿಕರು ಭೇಟಿ ನೀಡಿದ್ದಾರೆ. ಲಾಕ್‍ಡೌನ್ ಪ್ರಾರಂಭದಲ್ಲಿ ಭಯ ಪ್ರಯಾಣಿಕರಲ್ಲಿ ಕಡಿಮೆಯಾಗಿದೆ. ದಿನೇ ದಿನೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತೆ ಹೊಸ ರಂಗ ಪಡೆದುಕೊಳ್ಳುತ್ತಿದ್ದು, ಸಹಜ ಸ್ಥಿತಿಯತ್ತ ಮರಳಿದೆ. ಫೆಬ್ರವರಿ ತಿಂಗಳಲ್ಲಿ 673 ವಿಮಾನ ಸಂಚಾರ ನಡೆಸಿ 40,870 ಪ್ರಯಾಣಿಕರು ಪ್ರಯಾಣಿಸಿದ್ದರು. ಅಲ್ಲದೇ ಮಾರ್ಚ್ನಲ್ಲಿ 501 ವಿಮಾನ ಸಂಚರಿಸಿ 23,979 ಮಂದಿ ಓಡಾಡಿದ್ದರು. ಲಾಕ್‍ಡೌನ್ ಬಳಿಕ ಏಪ್ರಿಲ್ನಲ್ಲಿ ಶೂನ್ಯ ಪ್ರಮಾಣಕ್ಕೆ ಇಳಿದಿತ್ತು.
ನಂತರ ಮೇನಲ್ಲಿ 4 ವಿಮಾನ ಸಂಚಾರ ನಡೆಸಿದವು. ಅದರಲ್ಲಿ 67 ಮಂದಿ ಮಾತ್ರ ಪ್ರಯಾಣಿಸಿದ್ದರು. ಜೂನ್ನಲ್ಲಿ 14 ವಿಮಾನಗಳಲ್ಲಿ ಕೇವಲ 62 ಪ್ರಯಾಣಿಕರು ಓಡಾಡಿದ್ದರು. ಜುಲೈನಲ್ಲಿ 40 ವಿಮಾನಗಳಲ್ಲಿ 930 ಮಂದಿ ಸಂಚರಿಸಿದ್ದಾರೆ. ಆಗಸ್ಟ್ನಲ್ಲಿ ಹೆಚ್ಚು ಮಂದಿ ಲೋಹದ ಹಕ್ಕಿಗಳ ಮೊರೆ ಹೋಗಿದ್ದು, 2,355 ಮಂದಿ ಪ್ರಯಾಣ ಬೆಳೆಸಿದ್ದಾರೆ.
ಮಹಾಮಾರಿ ಕೊರೊನಾ ಹೊಡೆತಕ್ಕೆ ಎಲ್ಲ ವಿಧದ ಸಾರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಲಾಕ್‍ಡೌನ್ ಮುಂಚೆ 28 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಲಾಕ್‍ಡೌನ್‍ಗಿಂತ ಮೊದಲು ಅಹ್ಮದಾಬಾದ್, ಇಂದೋರ್, ಬೆಂಗಳೂರು, ಮೈಸೂರು, ಕಡಪಾ, ಹೈದರಾಬಾದ್, ತಿರುಪತಿ, ಮುಂಬೈ ಹಾಗೂ ಪುಣೆಗೆ ವಿಮಾನ ಸೇವೆ ಇತ್ತು.
ಪ್ರಸ್ತುತ ತಿರುಪತಿ ಹಾಗೂ ಕಡಪಾಗೆ ಉಳಿದೆಡೆಗೆ ಲೋಹದ ಹಕ್ಕಿಗಳು ಓಡಾಡುತ್ತಿವೆ. ಮೇ ಕೊನೆಯ ವಾರದಲ್ಲಿ 445 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, 26 ವಿಮಾನಗಳ ಆಗಮನ-ನಿರ್ಗಮನವಾಗಿದೆ. ಜೂನ್ 10,346 ಪ್ರಯಾಣಿಕರು ವಿಮಾನ ಸೇವೆ ಪಡೆದಿದ್ದು, 386 ವಿಮಾನಗಳ ಕಾರ್ಯಾಚರಣೆ ನಡೆದಿದೆ. ಜುಲೈನಲ್ಲಿ 14,500 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು 443 ವಿಮಾನಗಳು ಓಡಾಡಿವೆ. ಆಗಸ್ಟ್ನಲ್ಲಿ 18,280 ಪ್ರಯಾಣಿಕರು ಓಡಾಡಿದ್ದು, 421 ವಿಮಾನಗಳು ಸಂಚಾರ ನಡೆಸಿವೆ. ಈ ಮಾಸಾಂತ್ಯಕ್ಕೆ ಪ್ರಯಾಣಿಕರ ಸಂಖ್ಯೆ 20 ಸಾವಿರ ಗಡಿ ದಾಟುವ ನಿರೀಕ್ಷೆ ಇದೆ.
ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನ ವಿಮಾನಯಾನಕ್ಕೆ ಅನ್ಲಾಕ್ ನಂತರ ಬೇಡಿಕೆ ಹೆಚ್ಚಾಗಿದ್ದು, ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗ ಗೋವಾ, ಬೆಂಗಳೂರು, ಬೆಳಗಾವಿ, ಹೈದರಾಬಾದ್, ಕೊಚ್ಚಿ ನಗರಗಳಿಗೆ ಬಂದು ಹೋಗಲಿವೆ. ಶೀಘ್ರವೇ ಹೈದರಾಬಾದ್ ಹಾಗೂ ಕೊಚ್ಚಿಗೆ ವಿಮಾನಯಾನ ಹಾರಾಟ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಹಾಗೆಯೇ ಸದಾ ಚಟುವಟಿಕೆಯ ತಾಣವಾಗಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನಗಳ ಹಾರಾಟ ನಡೆಯುತ್ತಿದೆ. ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಇಲ್ಲವಾದರೂ ವಂದೇ ಭಾರತ್ ಮತ್ತು ಚಾರ್ಟೆಡ್ ವಿಮಾನಗಳು ವಿದೇಶದಲ್ಲಿರುವ ಭಾರತೀಯರನ್ನು ಕರೆ ತರುತ್ತಿದೆ. ದೇಶಿಯ ವಿಮಾನಗಳು ಬೆಂಗಳೂರು, ಮುಂಬೈ ನಡುವೆ ಸಂಚರಿಸುತ್ತಿವೆ.
ಒಟ್ಟಿನಲ್ಲಿ ವಿಮಾನಯಾನ ಸೇವೆ ಪುನರ್ ಆರಂಭದ ಬಳಿಕ ರಾಜ್ಯದಲ್ಲಿ ವಿಮಾನ ಪ್ರಯಾಣ ಸಹಜ ಸ್ಥಿತಿಯತ್ತ ಮರಳುತ್ತಿದೆ.