ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ 2020, ಲೋಕಾಯುಕ್ತ ತಿದ್ದುಪಡಿ ವಿಧೇಯಕ ಸೇರಿದಂತೆ ವಿಧಾನಸಭೆಯಿಂದ ಅಗೀಕೃತ ರೂಪದಲ್ಲಿದ್ದ 8 ವಿಧೇಯಕಗಳನ್ನು ವಿಧಾನ ಪರಿಷತ್ ಅಂಗೀಕರಿಸಿತು.
ವಿಧಾನ ಪರಿಷತ್ನಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ 2020 ಅನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಂಡಿಸಿದರು. ಈವರೆಗೂ ಬೆಂಗಳೂರು ವ್ಯಾಪ್ತಿಯ ಖಾಸಗಿ ವೈದ್ಯಕೀಯ ಕಾಲೇಜುಗಳ ಕೋವಿಡ್ ನಿಯಂತ್ರಣ ಜವಾಬ್ದಾರಿ ಜಂಟಿ ಆಯುಕ್ತರಿಗೆ ನೀಡಲಾಗುತ್ತಿತ್ತು ಈಗ ಅದನ್ನು ಬಿಬಿಎಂಪಿ ಆಯುಕ್ತರಿಗೆ ವರ್ಗಾಯಿಸಿ ಜವಾಬ್ದಾರಿ ನೀಡುವ ತಿದ್ದುಪಡಿ ಮಾಡಲಾಗಿದ್ದು ವಿಧೇಯಕಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು.
ಬಿಲ್ ಕುರಿತು ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಇದರಲ್ಲಿ ಬಿಬಿಎಂಪಿ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ ಆದರೆ ಬಿಬಿಎಂಪಿ ಆಯುಕ್ತರು ತಲೆ ಬಾಚಿದ್ದನ್ನೇ ನೋಡಿಲ್ಲ, ಅಷ್ಟು ಕೆಲಸ ಈಗಾಗಲೇ ಅವರಿಗೆ ವಹಿಸಿದ್ದಾರೆ ಹಾಗಾಗಿ ಬೇರೆಯವರಿಗೆ ಜವಾಬ್ದಾರಿ ಕೊಡಿ, ವಿಶೇಷ ಡಿಸಿ ಇದ್ದಾರೆ ಇತರ ಅಧಿಕಾರಿಗಳು ಇದ್ದಾರೆ ಎಂದರು.
ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಈಗ ಪಾಲಿಕೆಯನ್ನು 250 ವಾರ್ಡ್ ಮಾಡಲು ಹೊರಟಿದ್ದಾರೆ, ಆಯುಕ್ತರಿಗೆ ಕೆಲಸ ಹೆಚ್ಚಿದೆ. ಜಿಲ್ಲಾಧಿಕಾರಿಗಳಿಗೆ ಬೆಂಗಳೂರು ಜವಾಬ್ದಾರಿ ನೋಡಲು ಕಷ್ಟವೇನಲ್ಲ, ಆಯುಕ್ತರಿಗೆ ಒತ್ತಡ ಹೆಚ್ಚಿರವ ಕಾರಣ ಅದೇ ಕೇಡರ್ನ ಅಧಿಕಾರಿಗೆ ಜವಾಬ್ದಾರಿ ನೀಡಿ. ವಲಯ ಆಯುಕ್ತ, ವಿಶೇಷ ಡಿಸಿ ಇತ್ಯಾದಿ ಇದ್ದಾರೆ ಅವರಿಗೆ ಜವಾಬ್ದಾರಿ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ನ ಆರ್.ಬಿ ತಿಮ್ಮಾಪೂರ್ ಮಾತನಾಡಿ, ಬಿಬಿಎಂಪಿ ಆಯುಕ್ತರನ್ನೇ ಪ್ರತ್ಯೇಕ ಪ್ರಾಧಿಕಾರ ಮಾಡಿ ಅದಕ್ಕೆ ಈ ಆಯುಕ್ತರನ್ನೇ ನೇಮಕ ಮಾಡಿದರೆ ಹೇಗೆ? ಇವರ ಜೊತೆ ಮುಖ್ಯ ಆರೋಗ್ಯಾಧಿಕಾರಿ ಇದ್ದಾರೆ ಹಾಗಾಗಿ ಆರೋಗ್ಯೇತರ ಬೇರೆ ಅಧಿಕಾರ ನೇಮಿಸಿ ಎಂದರು.
ಆಯುಕ್ತರ ನೇಮಕಕ್ಕೆ ಸ್ಪಷ್ಟೀಕರಣ ನೀಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಒಬ್ಬ ಡಿಸಿ ವ್ಯಾಪ್ತಿಯ ಅಡಿಯಲ್ಲಿ ಬಿಬಿಎಂಪಿ ಬರಲ್ಲ, ಇದು ಡಿಸಿ ವ್ಯಾಪ್ತಿ ಮೀರಿದ್ದು ಹಾಗಾಗಿ ಬೇರೆ ಅಧಿಕಾರಿ ಇರಬೇಕು ಎಂದು ಈ ತಿದ್ದುಪಡಿ ಮಾಡುತ್ತಿದ್ದೇವೆ ಎಂದರು.
ನಂತರ ಮಾತನಾಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬೆಂಗಳೂರಿನಲ್ಲಿ ನಗರ ಹಾಗು ಗ್ರಾಮಾಂತರ ಇರುವ ಕಾರಣ ಹಾಗೂ ಕಂಟೈನ್ಮೆಂಟ್ ಝೋನ್ಗಳನ್ನು ಪಾಲಿಕೆ ಆಯುಕ್ತರೇ ನಿರ್ವಹಣೆ ಮಾಡುತ್ತಿದ್ದಾರೆ, ಹಾಗಾಗಿ ಅವರಿಗೇ ಅವಕಾಶ ನೀಡಿ ಬಿಲ್ ತಂದಿದ್ದೇವೆ ಇದನ್ನು ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು. ನಂತರ ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿ ಅಂಗೀಕಾರ ಪಡೆಯಲಾಯಿತು.
ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಂಡನೆ ಮಾಡಿದರು. ಲೋಕಾಯುಕ್ತಕ್ಕೆ ದೂರು ಬಂದಿದ್ದರೆ ವಿಳಂಬ ಆಗಬಾರದು ಎಂದು 90 ದಿನಗಳ ಒಳಗೆ ಪರಿಹಾರ ಆಗದೇ ಇದ್ದಲ್ಲಿ ಮತ್ತೆ 90 ದಿನ ಹೆಚ್ಚುವರಿ ಕಾಲ, 6 ತಿಂಗಳಲ್ಲಿ ಇತ್ಯರ್ಥ ಆಗದೇ ಇದ್ದಲ್ಲಿ ಮತ್ತೆ 6 ತಿಂಗಳ ಅವಕಾಶ ನೀಡುವುದನ್ನು ಒಳಗೊಂಡಿದೆ, ಪ್ರಾಥಮಿಕ ತನಿಖೆ, ಅಂತಿಮ ವರದಿ ವಿಳಂಬ ಆಗಬಾರದು ಎನ್ನುವ ಕಾರಣಕ್ಕೆ ಈ ಬಿಲ್ ತರಲಾಗಿದೆ. ಮೊದಲು ಯಾವುದೇ ಕಾಲಮಿತಿ ಇರಲಿಲ್ಲ ಈಗ ಕಾಲಮಿತಿ ನಿಗದಿಪಡಿಸಲಾಗುತ್ತಿದೆ ಎಂದರು.
ಬಿಲ್ ಮೇಲೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಕಾಲಾವಕಾಶ ವರ್ಗೀಕರಣ ಮಾಡಿ, ಎಷ್ಟು ದಿನ ಬೇಕೋ ಮಾಡಿ, ಮೊದಲು ಲೋಕಾಯುಕ್ತ ಎಂದರೆ ಬೆಲೆ ಇತ್ತು ಈಗ ಏನೂ ಉಳಿದಿಲ್ಲ. ಕಾಯ್ದೆಯ ಕಾಲಮಿತಿಯ ನಂತರವೂ ತನಿಖೆ ಮುಗಿಸದೇ ಇದ್ದಲ್ಲಿ ಏನು ಕ್ರಮ ಎಂದು ಹೇಳಿ ಎಂದರು.
ನಂತರ ಕಾಂಗ್ರೆಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ನ್ಯಾಯದಾನದಲ್ಲಿ ವಿಳಂಬ ತಪ್ಪಿಸಲು ಒಳ್ಳೆಯ ತಿದ್ದುಪಡಿ ತರಲಾಗಿದೆ, ಕೆಲವರ ಅವಧಿಯಲ್ಲಿ ಲೋಪದೋಷಗಳು ಆಗಿರುವುದು ಸಹಜ. ಆದರೆ ಹಿಂದೆ ನಮ್ಮ ಲೋಕಾಯುಕ್ತ ದೇಶಕ್ಕೆ ಮಾದರಿ ಆಗಿತ್ತು. ಲೋಕಾಯುಕ್ತಕ್ಕೆ ಸಿಬ್ಭಂದಿ ನೇಮಿಸುವಾಗ ಹಣಕೊಟ್ಡವರಿಗೆ ಅವಕಾಶ ನೀಡಲಾಗುತ್ತದೆ, ಲಂಚ ಪಡೆದ ಪ್ರಕರಣಗಳು ಇವೆ, ನೇಮಿಸುವಾಗಿ ಎಚ್ಚರ ಇರಬೇಕು, ದಕ್ಷರನ್ನು ನೇಮಿಸಬೇಕು ಅದರ ಬದಲು ಹಣ ಪಡೆದು ನೇಮಿಸಲಾಗುತ್ತದೆ. ಭ್ರಷ್ಟ ಅಧಿಕಾರಿಗಳನ್ನೇ ನೇಮಿಸಿದರೆ ತನಿಖೆ ವಿಳಂಬ ಆಗಲಿದೆ, ನ್ಯಾಯವೂ ಸಿಗಲ್ಲ ಹಾಗಾಗಿ ದಕ್ಷರ ನೇಮಿಸಬೇಕು ಎಂದರು.
ಬಿಲ್ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಜೆ.ಸಿ ಮಾಧುಸ್ವಾಮಿ, ಸಿಬ್ಬಂದಿ ಕೊರತೆ ಇಲ್ಲ, ತನಿಖೆ ನಡೆಸಲು ಅಗತ್ಯವಿರುವಷ್ಟು ಸಿಬ್ಬಂದಿ ಇದ್ದಾರೆ ಇನ್ನು ಅವದಿ ಮೀರಿದ ನಂತರ ತನಿಖಾ ವರದಿ ಸಲ್ಲಿಸದೇ ಇದ್ದರೆ ಆರೋಪಿತರು ಹೈಕೋರ್ಟ್ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಆ ವ್ಯಕ್ತಿ ಹೈಕೋರ್ಟ್ಗೆ ನೇರವಾಗಿ ಹೋಗಬಹುದು, ಈವರೆಗೂ ಟೈಂ ಲಿಮಿಟ್ ಇಲ್ಲದ ಕಾರಣ ಹೈಕೋರ್ಟ್ಗೆ ಹೋಗಲು ತನಿಖೆ ಮುಗಿಯಲಿ ಎನ್ನಲಾಗುತ್ತಿತ್ತು ಆದರೆ ಈಗ ಆ ಸಮಸ್ಯೆ ಇರಲ್ಲ ಎಂದರು. ನಂತರ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕಾರ ನೀಡಿತು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸಾರ್ವಜನಿಕ ಸೇವೆಗೆ ವಿಲೀನಗೊಳಿಸುವುದು ನಿಷೇಧ ವಿಧೇಯಕ 2020 ಅನ್ನು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಮಂಡಿಸಿದರು. ಪಕ್ಷಾತೀತವಾಗಿ ಎಲ್ಲರೂ ಈ ವಿಧೇಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಮಾಧುಸ್ವಾಮಿ ಮಂಡಿಸಿದರು. ಮುಕ್ತ ವಿವಿಗೆ ಈವರೆಗೂ ತೆರಿಗೆ ವಿನಾಯಿತಿ ಇರಲಿಲ್ಲ ಹೀಗಾಗಿ ಆದಾಯ ತೆರಿಗೆ ವಿನಾಯಿತಿ ಇರಲಿ ಎಂದು ಕಾನೂನು ತರಲಾಗಿದೆ ಹಾಗಾಗಿ ಅಂಗೀಕಾರ ನೀಡಬೇಕು ಎಂದು ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು ಹಾಗು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ 2020, ಕರ್ನಾಟಕ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕ 2020 ಹಾಗು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ 2020 ಅನ್ನು ಅಂಗೀಕರಿಸಲಾಯಿತು.