ಬೆಂಗಳೂರು: ನಗರದ ಶಂಕರಮಠ ವಾರ್ಡ್ನ ಕಿರ್ಲೋಸ್ಕರ್ ಕಾಲೋನಿಯಲ್ಲಿ ಫೀಟ್ಸ್ (ಅಪಸ್ಮಾರದಿಂದ ಮೂರ್ಛೆ) ಬಂದು ರಸ್ತೆಯಲ್ಲಿ ಬಿದ್ದಿದ್ದ 50 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಪಾಲಿಕೆ ಸದಸ್ಯ ಎಂ. ಶಿವರಾಜು ಮಾನವೀಯತೆ ಮೆರೆದಿದ್ದಾರೆ.
50 ವರ್ಷದ ವ್ಯಕ್ತಿಯೊಬ್ಬರು ಮೂರ್ಛೆ ಹೋಗಿ ಶಂಕರಮಠ ವಾರ್ಡ್ನ ಕಿರ್ಲೋಸ್ಕರ್ ಕಾಲೋನಿ ರಸ್ತೆಯಲ್ಲಿ ಬಿದ್ದಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಯಾರೂ ಕೂಡ ವ್ಯಕ್ತಿಯ ನೆರವಿಗೆ ಬಂದಿಲ್ಲ. ಬಳಿಕ ಸ್ಥಳಕ್ಕಾಮಿಸಿದ ಪಾಲಿಕೆ ಸದಸ್ಯ ಎಂ. ಶಿವರಾಜು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ, ಆಟೋ ಹಿಡಿದು ಅವರಿಗೆ ಲೋಟಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಸಿರುವ ಕಾರ್ಪೋರೇಟರ್ ಎಂ. ಶಿವರಾಜು, ಕೊರೊನಾ ಇದ್ದರೂ, ಇಲ್ಲದಿದ್ದರೂ ವ್ಯಕ್ತಿಯ ಜೀವ ಉಳಿಸುವುದು ಮುಖ್ಯ. ಹಾಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದೆ. ಇದೀಗ ವಯಸ್ಸಾದ ವ್ಯಕ್ತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದರು.