ಬೆಂಗಳೂರು: ಸಾರ್ವಜನಿಕರ ತೆರಿಗೆ ಹಣ ವಂಚನೆ ಆರೋಪಕ್ಕೆ ಗುರಿಯಾಗಿರುವ ಪೂರ್ವ ವಲಯದ ಆರೋಗ್ಯಾಧಿಕಾರಿಗಳ ವಿರುದ್ಧ ಟಿವಿಸಿಸಿ ತನಿಖೆ ನಡೆಸಿ ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಆರೋಗ್ಯಾಧಿಕಾರಿಗಳ ವಂಚನೆ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನೀಡಿದ್ದ ದೂರಿನ ಆಧಾರದ ಮೇರೆಗೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಸಂಘದ ಸದಸ್ಯರು ನೀಡಿರುವ ದೂರು ಕುರಿತಂತೆ ಸಮರ್ಪಕ ತನಿಖೆ ನಡೆಸಿ ವರದಿ ನೀಡುವಂತೆ ಟಿವಿಸಿಸಿ ಮುಖ್ಯ ಅಭಿಯಂತರರಿಗೆ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಪ್ರಕರಣದ ಪೂರ್ಣ ವಿವರ: ಪೂರ್ವ ವಲಯದ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಅಲ್ಲಿನ ಕೆಲ ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ನಂತರ ಬೇನಾಮಿ ವ್ಯಕ್ತಿಗಳಿಂದ ಹಣ ಪಡೆದು ಮೋಜು ಮಸ್ತಿ ನಡೆಸುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ಆರೋಪಿಸಿದ್ದರು.
ಈ ಕರ್ಮಕಾಂಡದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಪುತ್ರನ ಕೈವಾಡವಿದೆ. ಸಾರ್ವಜನಿಕರು ಪಾವತಿಸುವ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದರು. ಪೂರ್ವ ವಲಯ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂಪಾಯಿಗಳ ಕರ್ಮಕಾಂಡದ ಬಗ್ಗೆ ಅಮೃತ್‍ರಾಜ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಗತ್ಯ ದಾಖಲೆ ಒದಗಿಸಿದ್ದರು.
ಒಂದು ವೇಳೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮತದಾನ ಮತ್ತು ಫಲಿತಾಂಶ ಪ್ರಕಟವಾದ ನಂತರ ಅಂದರೆ ಮೇ 15 ರಂದು ಬಿಬಿಎಂಪಿ ಪೂರ್ವ ವಲಯ ಕಚೇರಿ ಇರುವ ಮೆಯೋ ಹಾಲ್ ಮುಂಭಾಗ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ನೌಕರರ ಕ್ಷೇಮಾಭಿವೃದ್ಧಿ ಸಂಘ ಸ್ವಾಗತ: ಬಿಬಿಎಂಪಿ ಮುಖ್ಯ ಆಯುಕ್ತರ ಈ ನಿರ್ಧಾರವನ್ನು ಸಂಘದ ಅಧ್ಯಕ್ಷ ಅಮೃತ್‍ರಾಜ್ ಸ್ವಾಗತಿಸಿದ್ದಾರೆ. ಮಾತ್ರವಲ್ಲ ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡಿ ಬಿಬಿಎಂಪಿ ಮಾನ ತೆಗೆದಿರುವ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಪೇಂಟರ್ ಸಾವು