ಬೆಂಗಳೂರು : ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಕಂಪನಿಗಳ ರಿಜಿಸ್ಟ್ರಾರ್ ಅವರು ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ) ನಡೆಸಲು ನಿಗದಿತ ದಿನಾಂಕವನ್ನು ಸೆಪ್ಟೆಂಬರ್ 30ಕ್ಕೆ ನಡೆಸುವ ಬದಲು 31 ಡಿಸೆಂಬರ್‌ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ)ಯು ಸ್ವಾಗತಿಸಿದೆ.
ಕೋವಿಡ್-19 ಸಂದರ್ಭದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ತೆಗೆದುಕೊಂಡಿರುವ ಈ ಚರಿತ್ರಾರ್ಹ ನಿರ್ಧಾರವು ದೇಶದ ಸುಮಾರು 12 ಲಕ್ಷ ಕಂಪನಿಗಳಿಗೆ ಅನುಕೂಲವಾಗಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ ಆರ್ ಜನಾರ್ಧನ್ ಹೇಳಿದರು.
ಚರಿತ್ರೆಯಲ್ಲಿಯೇ ಪ್ರಥಮ ಬಾರಿಗೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಎಲ್ಲಾ ಕಂಪನಿಗಳಿಗೆ ಈ ರಿಯಾಯಿತಿ ನೀಡಿರುವುದು ಮತ್ತೊಂದು ವಿಶೇಷತೆ. ವಾರ್ಷಿಕ ಲೆಕ್ಕಪತ್ರಗಳ ಅಂತಿಮಗೊಳಿಸುವಿಕೆ, ಲೆಕ್ಕಪರಿಶೋಧನೆಯ ಪೂರ್ಣಗೊಳಿಸುವಿಕೆ ಮತ್ತು ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಮತ್ತು ಕೈಗಾರಿಕಾ ಸಮುದಾಯದ ಅವಧಿ ವಿಸ್ತರಣೆಯ ಬೇಡಿಕೆಯಾಗಿತ್ತು.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮತ್ತು ಕಂಪನಿಗಳ ರಿಜಿಸ್ಟ್ರಾರ್ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಪ್ರಕಟಣೆಯೊಂದಿಗೆ ಲಗತ್ತಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಹಲವಾರು ಕಂಪನಿಗಳು ಹಾಗೂ ಸಂಸ್ಥೆಗಳು ನೀಡಿದ ಮನವಿಯ ಮೇರೆಗೆ ಮಾಡಲಾಗಿದೆ. ಈ ಆದೇಶವು ಕಂಪನಿಗಳು ನಿಗದಿತ ಸಮಯದಲ್ಲಿ ಜಿಎನ್ಎಲ್-1 ಸಲ್ಲಿಸದೇ ಇರುವ ಕಂಪನಿಗಳಿಗೂ, ನಿಗದಿತ ಶುಲ್ಕ ಪಾವತಿ ಮಾಡದ ಕಂಪನಿಗಳಿಗೂ, ಈಗಾಗಲೇ ಅರ್ಜಿ ಸಲ್ಲಿಸಿ, ಅನುಮೋದನೆಯಾಗದಿರುವ ಅಥವಾ ತಿರಸ್ಕರಿಸಿರುವ ಕಂಪನಿಗಳಿಗೂ ಅನ್ವಯವಾಗುತ್ತಿರುವುದು ಅತ್ಯಂತ ವಿಶೇಷತೆಯಾಗಿದೆ ಎಂದು ತಿಳಿಸಿದರು.
ಈ ಆದೇಶದೊಂದಿಗೆ ಕರ್ನಾಟಕದ ಎಲ್ಲಾ ಕಂಪನಿಗಳಿಗೆ 2020ರ ಡಿಸೆಂಬರ್ ಅಂತ್ಯದವರೆಗೂ ಸಮಯಾವಕಾಶವಿರುವುದರಿಂದ ಎಜಿಎಂ ನಡೆಸಲು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗಿದೆ.