ಬೆಂಗಳೂರು: ರಾಜ್ಯದಲ್ಲಿ ಇಂದು 7,330 ಹೊಸ ಪಾಸಿಟಿವ್ ಕೇಸ್ ದೃಢವಾಗಿದ್ದು, ಇದುವರೆಗೂ ಒಟ್ಟು 2,71,876 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇತ್ತ 93 ಜನರು ಕೊರೊನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,615ಕ್ಕೆ ಏರಿಕೆ ಆಗಿದೆ. 7,626 ಮಂದಿ ಡಿಸ್ಚಾರ್ಜ್ ಆಗಿದ್ದು ಇದುವರೆಗೆ 1,84,568 ಜನರು ಗುಣಮುಖರಾಗಿದ್ದಾರೆ.
82,677 ಸಕ್ರಿಯ ಸೋಂಕಿತರಿದ್ದು, ಇದರಲ್ಲಿ ಬರೋಬ್ಬರಿ 727 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಕಡೆ ಖಚಿತ ಪ್ರಕರಣಗಳು 3 ಲಕ್ಷ ಸಮೀಪಿಸುತ್ತಿದ್ದರೆ, ಮತ್ತೊಂದು ಕಡೆ ಗುಣಮುಖರ ಸಂಖ್ಯೆಯು 2 ಲಕ್ಷ ದಾಟಿದೆ. ಇದರ ಜೊತೆಗೆ ಬರೋಬ್ಬರಿ 4,21,271 ಮಂದಿ ಸೋಂಕಿತರ ಸಂಪರ್ಕ ಹೊಂದಿದ್ದು ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. 58,618 ಮಂದಿಗೆ ಇಂದು ಕೊರೊನಾ ಪರೀಕ್ಷೆ ಮಾಡಿದ್ದು 23,73,103 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ.
ಅಂತರ್ ಜಿಲ್ಲೆ-ರಾಜ್ಯ ಸಂಚಾರ ನಿರ್ಬಂಧ ವಾಪಸ್:
ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಗೆ ಜನರ ಓಡಾಟವೇ ಮುಖ್ಯ ಕಾರಣ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಹೀಗಾಗಿ, ರಾಜ್ಯ ಸರ್ಕಾರ ಹಲವು ನಿರ್ಬಂಧವನ್ನು ಹಾಕಿತ್ತು. ಅಂತರ್ ಜಿಲ್ಲೆ ಓಡಾಟಕ್ಕೆ ಅವಕಾಶ ಕೊಟ್ಟಿದ್ದ ಸರ್ಕಾರ, ಅಂತಾರಾಜ್ಯ ಓಡಾಟಕ್ಕೆ ಸೇವಾಸಿಂಧು ಪೋರ್ಟಲ್ನಲ್ಲಿ ನೊಂದಣಿ ಕಡ್ಡಾಯ ಮಾಡಿತ್ತು.
ಇತ್ತ ಸಾರಿಗೆ ಸೇವೆಗಳು ಅಂತಾರಾಜ್ಯ ಓಡಾಟ ನಿಲ್ಲಿಸಿವೆ. ಇದೀಗ ಕೇಂದ್ರ ಸರ್ಕಾರದ ಗೃಹ ಇಲಾಖೆಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಸಂಚಾರಕ್ಕೆ ಯಾವುದೇ ನಿರ್ಬಂಧ ಇರಬಾರದೆಂದು ಸೂಚಿಸಲಾಗಿದೆ.