ಬೆಂಗಳೂರು: ನಗರದ ಎಸ್.ಕೆ. ಗಾರ್ಡನ್ ವಾರ್ಡ್ನ ಬಿಎಂ ಲೇಔಟ್ ನಿವಾಸಿ 50 ವರ್ಷ ವಯಸ್ಸಿನ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಎಸ್.ಕೆ. ಗಾರ್ಡನ್ನಲ್ಲಿ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ಇವರಿಗೆ ಮೊದಲು ಜ್ವರ ಕಾಣಿಸಿಕೊಂಡಿದೆ. ಇಂಜೆಕ್ಷನ್ ತಗೆದುಕೊಂಡ ಬಳಿಕ ಜ್ವರ ಕಡಿಮೆ ಆಗಿತ್ತು. ಆದರೆ ನಿನ್ನೆ ಸಂಜೆಯಿಂದ ಉಸಿರಾಟದ ಸಮಸ್ಯೆ ಕೂಡ ಆರಂಭವಾಗಿತ್ತು. ನಂತರ ಶಿಫಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆಡ್ ಇಲ್ಲ ಅಂತ ವಾಪಸ್ ಕಳುಹಿಸಿದ್ದಾರೆ. ಜೈನ್ ಆಸ್ಪತ್ರೆಗೆ ಹೋದಾಗ ಕೋವಿಡ್ ರಿಪೋರ್ಟ್ ಇಲ್ಲದೆ ಅಡ್ಮಿಟ್ ಮಾಡಿಕೊಳ್ಳಲ್ಲ ಅಂತ ತಿಳಿಸಿದ್ದಾರೆ. ಬಳಿಕ ಸೆಂಟ್ ಮಾರ್ಥಾಸ್, ರಾಜೀವ್ ಗಾಂಧಿ, ಫ್ರಂಟ್ ಲೈನ್ ಆಸ್ಪತ್ರೆ, ಪೀಪಲ್ ಟ್ರೀ ಸೇರಿದಂತೆ ಹತ್ತಾರು ಆಸ್ಪತ್ರೆಗಳಿಗೆ ಅಲೆದರೂ ಯಾರೂ ದಾಖಲು ಮಾಡಿಕೊಳ್ಳಲಿಲ್ಲ. ಕೊನೆಗೆ ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಹಾಕಿ ರಾತ್ರಿ ಪೂರ್ತಿ ಆರೈಕೆ ಮಾಡಿದ್ದಾರೆ.
ಇಂದು ಬೆಳಗ್ಗೆ ಬೌರಿಂಗ್ ಆಸ್ಪತ್ರೆಗೆ ಆಟೋದಲ್ಲಿ ಕುಟುಂಬದವರು ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟರಲ್ಲಿ ಶಿಕ್ಷಕಿ ಮೃತಪಟ್ಟಿದ್ದಾರೆ. ಇವರು ಮನೆ ಮನೆಗೆ ಅಲೆದು ಕೊರೊನಾ ರೋಗಿಗಳ ಮಾಹಿತಿ ಕಲೆ ಹಾಕುತ್ತಿದ್ದರು. ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಫ್ರಂಟ್ ಲೈನ್ ವಾರಿಯರ್ ಆಗಿ ಕೆಲಸ ಮಾಡಿದವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.