ಸುಬ್ರಹ್ಮಣ್ಯ : ದಕ್ಷಿಣ ಕನ್ನಡದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿ ಕೊರೊನಾ ವೈರಸ್ ಭೀತಿಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ.
ಕೊರೊನಾ ಭೀತಿ ಹಿನ್ನೆಲೆ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ದೇಶ-ವಿದೇಶಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ಆಗಮಿಸುತ್ತಾರೆ. ಹಾಗಾಗಿ ಈ ಸ್ಥಳಗಳಲ್ಲಿ ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತ ಅತೀ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
ಈ ಕುರಿತಂತೆ ಈಟಿವಿಯು ಕುಕ್ಕೆ ಸುಬ್ರಹ್ಮಣ್ಯ ಕಾರ್ಯನಿರ್ವಾಹಣಾಧಿಕಾರಿಯನ್ನು ಫೋನ್ ಮೂಲಕ ಮಾತನಾಡಿಸಿದ್ದು, ಈಗಾಗಲೇ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಜೊತೆಗೆ ಬ್ಯಾನರ್ ಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುವುದು ಎಂದರು.
ಕುಕ್ಕೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಮಾತನಾಡಿ, ಈಗಾಗಲೇ ಸ್ಥಳೀಯವಾಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕರಪತ್ರಗಳನ್ನು ಪ್ರಕಟಿಸಿ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತರು ಸೇರಿ ಸಾರ್ವಜನಿಕರಿಗೆ ಮುಂಜಾಗೃತಾ ಕ್ರಮವಾಗಿ ಅರಿವು ಮೂಡಿಸಲಾಗ್ತಿದೆ ಎಂದಿದ್ದಾರೆ.