ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪತ್ತೆಯಾದ ದಿನದಿಂದ ಯಾವಾಗಪ್ಪಾ ಈ ರೋಗಕ್ಕೆ ಔಷಧಿ ಬರುತ್ತೆ ಅಂತಾ ಕಾದು ಕುಳಿತವರು ಸಾಕಷ್ಟು ಜನ. ಕೊರೊನಾ ಸೋಂಕಿಗೆ ಸಂಜೀವಿನಿಯಂತೆ ಬಂದಿದ್ದು ಕೋವಿಡ್ ವ್ಯಾಕ್ಸಿನ್. ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರತುಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಹಾಕಲಾಗುತ್ತಿತ್ತು.
ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿತ್ತು. ಆದರೆ, ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಜನವರಿ 16 ರಂದು ಇಡೀ ದೇಶದಲ್ಲೇ ಲಸಿಕೀಕರಣಕ್ಕೆ ಚಾಲನೆ ನೀಡಲಾಯ್ತು.
ಕೊರೊನಾ ಪತ್ತೆಯಾದ ದಿನದಿಂದ ಇಂದಿನವರೆಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದವರು ವೈದ್ಯಕೀಯ ಸಿಬ್ಬಂದಿ. ಕೊರೊನಾ ಹಿನ್ನೆಲೆ ವೈದ್ಯಕೀಯ ಸಿಬ್ಬಂದಿ ರಜೆಯನ್ನೂ ಕಡಿತ ಮಾಡಲಾಗಿತ್ತು. ಹೀಗಾಗಿ, ಅವರಿಗೆ ವಾರದ ಒಂದು ದಿನ ಬಿಡುವು ನೀಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಕಾರಣಕ್ಕೆ ಭಾನುವಾರದಂದು ಕೊರೊನಾ ಲಸಿಕಾ ಅಭಿಯಾನಕ್ಕೆ ಬ್ರೇಕ್ ಹಾಕಿ ಆ ದಿನದಂದು ವೈದ್ಯಕೀಯ ಸಿಬ್ಬಂದಿಗೆ ವಿರಾಮ ನೀಡಲು ಮುಂದಾಗಿದೆ. ಈಗಾಗಲೇ ಶೇ.80ರಷ್ಟು ಮೊದಲ ಡೋಸ್ ಲಸಿಕೀಕರಣ ಮುಗಿಸಿರುವ ಇಲಾಖೆ, ಕಳೆದೊಂದು ವರ್ಷದಿಂದ ಸಿಬ್ಬಂದಿಗೆ ಸತತ ಹೊರೆಯಾಗಿದೆ. ಹೀಗಾಗಿ, ಸದ್ಯ ಭಾನುವಾರದಂದು ಬಿಡುವು ಕೊಡಲು ಮುಂದಾಗಿದೆ.
ಹಿರಿಯ ನಾಗರಿಕರ ಮನೆ ಬಾಗಿಲಿಗೆ ಲಸಿಕೆ : ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಲಸಿಕಾ ಕೇಂದ್ರಕ್ಕೆ ಬರಲು ಸಾಧ್ಯವಾಗದೇ ಇರುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಲಸಿಕೆ ನೀಡಲು ಕಾರ್ಯಕ್ರಮ ರೂಪಿಸಿದೆ. ಇದನ್ನ ಮುಂದಿನ ದಿನಗಳಲ್ಲೂ ಮುಂದುವರೆಸಲಾಗುವುದು ಎಂದು ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದರು.
ರಾಜ್ಯದಲ್ಲಿಂದು 636 ಮಂದಿಗೆ ಕೋವಿಡ್ ಸೋಂಕು : ರಾಜ್ಯದಲ್ಲಿಂದು 1,69,319 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 636 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,77,225ಕ್ಕೆ ಏರಿಕೆ ಆಗಿದೆ.
ಇತ್ತ 745 ಮಂದಿ ಡಿಸ್ಜಾರ್ಜ್ ಆಗಿದ್ದು 29,27,029 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಇಂದು 4 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 37,811ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 12,356 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.37% ರಷ್ಟಿದ್ದರೆ ಸಾವಿನ ಪ್ರಮಾಣ 0.62% ರಷ್ಟಿದೆ.