ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ ಒಟ್ಟು 3,649 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 71,069ಕ್ಕೇರಿಕೆಯಾಗಿದೆ.
ಶಿವಮೊಗ್ಗ: ಜಿಲ್ಲೆಯಲ್ಲಿಂದು 64 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ 933 ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 33 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ 522 ಜನ ಗುಣಮುಖರಾಗಿದ್ದಾರೆ. ಇಂದು ಶಿವಮೊಗ್ಗದಲ್ಲಿ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು, ಇದರಲ್ಲಿ ಶಿವಮೊಗ್ಗದ 45 ವರ್ಷದ ಮಹಿಳೆ ಹಾಗೂ ದಾವಣಗೆರೆಯ 65 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಇದರಿಂದ ಸಾವಿನ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗ: ಜಿಲ್ಲೆಯಲ್ಲಿಂದು 23 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 270 ಕ್ಕೆ ಏರಿಕೆಯಾಗಿದೆ. ಇಲ್ಲಿಯತನಕ 296 ಜನರ ಮೂಗು, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 297 ಜನರ ಪೈಕಿ 23 ಜನರಿಗೆ ಕೊರೊನಾ ಇರುವುದು ದೃಢವಾಗಿದೆ.
ದಾವಣಗೆರೆ: ಜಿಲ್ಲೆಯಲ್ಲಿ ಇಂದು 95 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಸಾವಿರ ಗಡಿ ಸಮೀಪಿಸಿದೆ. ಇದುವರೆಗೆ ಜಿಲ್ಲೆಯಲ್ಲಿ 975 ಸೋಂಕಿತರಿದ್ದಾರೆ. ಆಸ್ಪತ್ರೆಯಿಂದ 70 ಮಂದಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಒಟ್ಟು 640 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 304 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಗದಗ: ಜಿಲ್ಲೆಯಲ್ಲಿ ಇಂದು ಜನರು ಸ್ವಲ್ಪ ನಿರಾಳತೆಗೆ ಒಳಗಾಗಿದ್ದಾರೆ. ಯಾಕೆಂದರೆ ಗದಗ ಜಿಲ್ಲೆಯಲ್ಲಿ ಇಂದು ಸೋಂಕಿತರ ಸಂಖ್ಯೆ 14 ಕ್ಕೆ ಇಳಿದಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ 30 ಕ್ಕಿಂತ ಹೆಚ್ಚು ದೃಢಪಟ್ಟಿರೋ ಬಗ್ಗೆ ದಾಖಲಾಗ್ತಿತ್ತು. ಇಂದು ಕೇವಲ 14 ಜನರಿಗೆ ದೃಢಪಟ್ಟಿದೆ. ಸದ್ಯ ಈ ಮೂಲಕ ಸೋಂಕಿತರ ಸಂಖ್ಯೆ 631 ಕ್ಕೆ ಏರಿದೆ.
ಈ ಪೈಕಿ ಇಂದು ಓರ್ವ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಮೂಲಕ ಮೃತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. ಇನ್ನು 21 ಜನ ಇಂದು ಒಂದೇ ದಿನಕ್ಕೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಇಂದು ದೃಢಪಟ್ಟ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ವಿಜಯಪುರ: ಕೊರೊನಾ ಆರ್ಭಟ ಜಿಲ್ಲೆಯಲ್ಲಿ ಇಂದು ಸಂಪೂರ್ಣ ಇಳಿಮುಖ ಕಂಡಿದೆ. ಕಳೆದ ಐದು ದಿನಗಳಿಂದ ನಿತ್ಯ ಶತಕ ಬಾರಿಸುತ್ತಿದ್ದ ಪಾಸಿಟಿವ್ ಇಂದು 13 ಜನರಲ್ಲಿ ಪತ್ತೆಯಾಗಿದೆ. ಈ ಮೂಲಕ ಸೊಂಕಿತರ ಸಂಖ್ಯೆ 1758 ಕ್ಕೆ ಏರಿಕೆಯಾಗಿದೆ. ಇಂದು ವೃದ್ಧೆಯೊಬ್ಬಳು ಕೋವಿಡ್ ಪಾಸಿಟಿವ್ನಿಂದ ಮೃತಪಟ್ಟಿದ್ದಾಳೆ.
ಇಂಡಿ ತಾಲೂಕಿನ ಗುಬ್ಬೆವಾಡದ ರೋಗಿ ನಂ: 47258, 70 ವರ್ಷದ ವೃದ್ಧೆ ಮಹಿಳೆ ಉಸಿರಾಟದ ತೊಂದರೆಯಿಂದ ಜುಲೈ 14ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಅವರಿಗೆ ಪಾಸಿಟಿವ್ ಇರುವದು ದೃಢಪಟ್ಟಿದೆ. ಜುಲೈ 16ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಧಾರವಾಡ: ಜಿಲ್ಲೆಯಲ್ಲಿಂದು 84 ಜನರಿಗೆ ಕೊರೊನಾ ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ 2,327 ಕ್ಕೆ ಏರಿಕೆಯಾಗಿದೆ. ಒಂದೇ ದಿನ ಕೊರೊನಾದಿಂದ 5 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ ಜಿಲ್ಲೆಯಲ್ಲಿ 73 ಕ್ಕೆ ಏರಿಕೆಯಾಗಿದೆ. ಉಳಿದ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳ : ಜಿಲ್ಲೆಯಲ್ಲಿ ಇಂದು 14 ಜನರಿಗೆ ಪಾಸಿಟಿವ್ ದೃಢವಾಗಿದ್ದು, ಸೋಂಕಿತರ ಸಂಖ್ಯೆ 586 ಕ್ಕೆ ಏರಿಕೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ 8, ಗಂಗಾವತಿ ತಾಲೂಕಿನಲ್ಲಿ 5 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈವರೆಗೆ ಸೋಂಕಿನಿಂದ 12 ಜನರು ಸಾವನ್ನಪ್ಪಿದ್ದು, 337 ಜನರು ಗುಣಮುಖರಾಗಿದ್ದಾರೆ. 9 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದ್ದು, 211 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಈವರೆಗೆ 18796 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದ್ದು, 18277 ಜನರ ವರದಿ ಬಂದಿದೆ. ಇನ್ನೂ 519 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಮಾಹಿತಿ ನೀಡಿದ್ದಾರೆ.
ರಾಯಚೂರು: ಜಿಲ್ಲೆಯಲ್ಲಿ ಇಂದು ಇಬ್ಬರು ಕೊರೊನಾ ಸೊಂಕಿತರು ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ 4 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1003ಕ್ಕೆ ಏರಿಕೆಯಾಗಿದೆ. ಮಾನ್ವಿ ತಾಲೂಕಿನ 2, ರಾಯಚೂರು ಹಾಗೂ ದೇವದುರ್ಗ ತಾಲೂಕಿನ ತಲಾ ಒಂದು ಪ್ರಕರಣ ಪತ್ತೆಯಾಗಿವೆ. ದೇವದುರ್ಗ ತಾಲೂಕಿನಲ್ಲಿ ಈ ಹಿಂದೆ ಹೆಚ್ಚಿನ ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ ರಾಯಚೂರು ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದಂತಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ 297 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಒಪೆಕ್ ಆಸ್ಪತ್ರೆಯಲ್ಲಿ 136 ಜನರಿಗೆ ಹಾಗೂ ಕ್ವಾರಂಟೈನ್ ಕೇರ್‌ನಲ್ಲಿ 161 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ: ಕೊರೊನಾಗೆ ಇಂದು ನಾಲ್ವರು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ. ಮೃತ ನಾಲ್ವರೂ ಬೆಳಗಾವಿ ತಾಲೂಕಿನವರು. 55 ವರ್ಷ ಹಾಗೂ 60 ವರ್ಷದ ಪುರುಷರು ಮತ್ತು 38 ವರ್ಷ, 30 ವರ್ಷ ವಯಸ್ಸಿನ ಮಹಿಳೆಯರಾಗಿದ್ದಾರೆ. ಅಲ್ಲದೆ ಇಂದೂ 23 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1096ಕ್ಕೆ ಏರಿಕೆಯಾಗಿದೆ. 22 ಜನರು ಗುಣಮುಖರಾಗಿದ್ದು, ಸದ್ಯ 640 ಸಕ್ರಿಯ ಪ್ರಕರಣಗಳಿವೆ.