ಬೆಂಗಳೂರು: ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್ ಎನ್ನಲಾಗುತ್ತಿದ್ದು, ಮತ್ತೊಮ್ಮೆ ಮಕ್ಕಳು ಮನೆಯಲ್ಲೇ ಲಾಕ್ ಆಗುವ ಪರಿಸ್ಥಿತಿ ನಿರ್ಮಾಣವಾಗುತ್ತಾ ಅನ್ನೋ ಅನುಮಾನಗಳು ಶುರುವಾಗಿವೆ. ಈಗಷ್ಟೇ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಹಂತ - ಹಂತವಾಗಿ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿದೆ.
ಈ ನಡುವೆ ಪ್ರಾಥಮಿಕ ತರಗತಿಯನ್ನೂ ಅಂದರೆ ಪೂರ್ಣಪ್ರಮಾಣದಲ್ಲಿ ಎಲ್ಲ ತರಗತಿಗಳ ಆರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಅಂದ ಹಾಗೆ, ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಕಾದಿದೆಯಾ ಅನ್ನೋ ಪ್ರಶ್ನೆಗೆ IISC ತಜ್ಞರ ಅಧ್ಯಯನ ವರದಿಯಲ್ಲಿ ಶಾಕಿಂಗ್ ಅಂಶ ಬಯಲಾಗಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚಿನ ಮಕ್ಕಳಿಗೆ ಕೋವಿಡ್ ತಗುಲಿದೆ.
ಕೋವಿಡ್ ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ. ಮೂರನೇ ಅಲೆಯಲ್ಲಿ ಏಳು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಮಕ್ಕಳಿಗೆ ಕೋವಿಡ್ ಲಸಿಕೆ ಇಲ್ಲದಿರುವುದರಿಂದ ಸೋಂಕು ಹೆಚ್ಚಾಗಿ ತಗುಲುವ ಸಾಧ್ಯತೆಯಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗ್ತಿದ್ದು, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರಲಿದೆ.
ಸೋಂಕು ಬಂದರೂ ಅದರ ತೀವ್ರತೆ ಕಡಿಮೆ ಇರಲಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ, ಮಕ್ಕಳಿಗೆ ಲಸಿಕೆ ಇಲ್ಲದಿರುವುದರಿಂದ ರೋಗದ ವಿರುದ್ಧ ಹೋರಾಡುವುದು ಹಾಗೂ ಮಕ್ಕಳಿಗೆ ವೈರಸ್ ಬಾರದಂತೆ ನೋಡಿಕೊಳ್ಳುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ.
ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ಹೇಗಿತ್ತು?
0 ರಿಂದ 9 ವರ್ಷದ ವಯಸ್ಸಿನ ಮಕ್ಕಳು
ಮೊದಲ ಅಲೆ- 27,674 ಮಕ್ಕಳಿಗೆ ಸೋಂಕು
ಎರಡನೇ ಅಲೆ- 64,637 ಮಕ್ಕಳಿಗೆ ಸೋಂಕು
10-19 ವರ್ಷದ ವಯಸ್ಸಿನ ಮಕ್ಕಳು
ಮೊದಲ ಅಲೆ - 64,806
ಎರಡನೇ ಅಲೆ - 1,63,566
ಪೋಷಕರೇ ಆಗಬೇಕು ಸರ್ಪಗಾವಲು
ವೈರಸ್ನಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸ್ವಚ್ಛತೆ ಬಗ್ಗೆ ಅವರಿಗೆ ತಿಳಿ ಹೇಳಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಗಣನೀಯ ಇಳಿಕೆ.. 25,404 ಜನರಿಗೆ ಕೊರೊನಾ ದೃಢ