ಬೆಂಗಳೂರು: ಕೊರೊನಾ ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಆರೋಗ್ಯ ಇಲಾಖೆಯು ಈಗಾಗಲೇ 29 ಪ್ರಯೋಗಾಲಯಗಳನ್ನು ತೆರೆದಿದ್ದು, ಇಂದಿನಿಂದ ಖಾಸಗಿ ಪ್ರಯೋಗಾಲಯಗಳ ಪರೀಕ್ಷಾ ವೆಚ್ಚವನ್ನು ಆರೋಗ್ಯ ಇಲಾಖೆ ಭರಸಲಿದೆ ಎಂದು ಸುತ್ತೋಲೆ ಹೊರಡಿಸಿದೆ.
ಈ ಹಿಂದೆ ಸರ್ಕಾರಿ ಪ್ರಯೋಗಾಲಯಗಳ ಜೊತೆಗೆ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿತ್ತು. ಇದಕ್ಕಾಗಿ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ಪರೀಕ್ಷೆ ವೆಚ್ಚವನ್ನು ರೋಗಿಯ ಬದಲು ಸರ್ಕಾರವೇ ಭರಿಸಲು ಮುಂದಾಗಿದೆ. ಇದಕ್ಕಾಗಿ ಎಂಒಯು ಮಾಡಿಕೊಳ್ಳಲಾಗುತ್ತಿದೆ.
ಸಾರ್ವಜನಿಕರು ಯಾವುದೇ ವೆಚ್ಚ ಭರಿಸದಂತೆ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.