ಬೆಂಗಳೂರು: ಕೊರೊನಾ ಹರಡದಂತೆ ಮುಂಜಾಗ್ರತ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿರುವ ಕೈದಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ವೈದ್ಯಕೀಯ ತಂಡವನ್ನು ನಿಯೋಜಿಸುವಂತೆ ಸೂಚಿಸಿದೆ.
![Health Department notice](https://etvbharatimages.akamaized.net/etvbharat/prod-images/6992331_600_6992331_1588168278373.png)
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಪರಾಧ ಎಸಗಿ ಜೈಲು ಸೇರುವವರ ಸಂಖ್ಯೆ ಕಡಿಮೆಯಾದರೂ ಆತಂಕ ಮಾತ್ರ ದೂರವಾಗಿಲ್ಲ. ಕ್ರೈಂ ಮಾಡಿ ಜೈಲಿಗೆ ಪ್ರವೇಶ ಮಾಡುವ ಆರೋಪಿಗಳಿಗೆ ಏನಾದರೂ ಸೋಂಕು ಇದ್ದರೆ ಕಾರಾಗೃಹ ಸಿಬ್ಬಂದಿ ಹಾಗೂ ಇತರ ಆರೋಪಿಗಳಿಗೂ ವೇಗವಾಗಿ ಹರಡುವ ಸಾಧ್ಯತೆಯಿದೆ. ಮುಂಜಾಗ್ರತ ಕ್ರಮವಾಗಿ ರಾಜ್ಯದಲ್ಲಿರುವ ಎಲ್ಲ ಕೈದಿಗಳಿಗೆ ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ರಾಜ್ಯದ 8 ಕೇಂದ್ರ ಕಾರಾಗೃಹಗಳಾದ ಬೆಂಗಳೂರು, ಬಳ್ಳಾರಿ, ಬೆಳಗಾವಿ, ಮೈಸೂರು, ಶಿವಮೊಗ್ಗ, ಬಿಜಾಪುರ, ಧಾರವಾಡ ಹಾಗೂ ಕಲಬುರಗಿ, ಜಿಲ್ಲಾ ಮಟ್ಟದಲ್ಲಿ 21, ತಾಲೂಕು ಮಟ್ಟದಲ್ಲಿ 28 ಸೇರಿದಂತೆ ಒಟ್ಟು 58 ಕಾರಾಗೃಹಗಳ ಪೈಕಿ 15 ಸಾವಿರ ಕೈದಿಗಳಿದ್ದಾರೆ. ಈ ಪೈಕಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 4,529 ಕೈದಿಗಳಿದ್ದಾರೆ.
ಇದರ ಜೊತೆಗೆ ಕೈದಿಗಳ ಭದ್ರತೆಗೆ ನಿಯೋಜನೆಗೊಂಡಿರೋ ಜೈಲು ಸಿಬ್ಬಂದಿಗೂ ತಪಾಸಣೆ ಒಳಪಡಿಸುವಂತೆ ಆರೋಗ್ಯ ಇಲಾಖೆಯಿಂದ ಡಿಎಚ್ಒಗೆ ಪತ್ರ ಬರೆದಿದೆ. ಪ್ರತಿಯೊಬ್ಬ ಕೈದಿಯ ಹೆಸರು, ವಿಳಾಸ, ಕ್ರೈಂ ಕೇಸ್ ಡೀಟೆಲ್ಸ್ ಪಡೆದು ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ.