ಬೆಂಗಳೂರು: ಹೊಸ ರೂಪದ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಅವರು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದರು.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಇನ್ನಷ್ಟು ಆತಂಕ ಮೂಡಿಸುವ ಸಾಧ್ಯತೆ ಇದೆ. ಇದರ ಜೊತೆ ವಿದೇಶದಿಂದ ಸಾಕಷ್ಟು ಮಂದಿ ಭಾರತಕ್ಕೆ ವಾಪಸ್ ಆಗಿದ್ದಾರೆ. ನಿನ್ನೆ ತಾನೆ ಯುಕೆಯಿಂದ ಆಗಮಿಸಿದ್ದ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯ ರಾಜ್ಯಸರ್ಕಾರಕ್ಕೆ ಎದುರಾಗಿದೆ. ಈಗಾಗಲೇ ಪ್ರತಿಪಕ್ಷದ ನಾಯಕರು ಸಹ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇನ್ನಷ್ಟು ಸಮಸ್ಯೆ ಸೃಷ್ಟಿಸದಿರಲಿ. ಆದಷ್ಟು ಬೇಗ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಿ ಎಂದು ಸಚಿವರು ಸಭೆಯಲ್ಲಿ ಸಲಹೆ ನೀಡಿದ್ದಾರೆ.
ಕಳೆದ 15 ದಿನಗಳಲ್ಲಿ ವಿದೇಶದಿಂದ ಬೆಂಗಳೂರಿಗೆ ಆಗಮಿಸಿರುವ 12 ಸಾವಿರಕ್ಕೂ ಹೆಚ್ಚು ಮಂದಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಆರು ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ಕೇರಳದ ಕೊನ್ನೂರು ಸೇರಿದಂತೆ ಗಡಿ ರಾಜ್ಯಗಳ ವಿವಿಧ ವಿಮಾನ ನಿಲ್ದಾಣಗಳಿಗೆ ಆಗಮಿಸಿ ಕರ್ನಾಟಕ ಪ್ರವೇಶಿಸಿರುವ ಸಾವಿರಾರು ಮಂದಿ ಪ್ರವಾಸಿಗರನ್ನು ಸರಿಯಾದ ರೀತಿಯಲ್ಲಿ ಕೊರೊನಾ ಟೆಸ್ಟ್ ಮಾಡಿಲ್ಲ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿವೆ.ಈ ಎಲ್ಲಾ ಕಾರಣಗಳಿಂದ ಸರ್ಕಾರ ಕೈಗೊಂಡ ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು ಸಚಿವ ಸುಧಾಕರ್ ಮಹತ್ವದ ಸಭೆ ನಡೆಸಿದ್ದಾರೆ.
ಓದಿ: ಲಂಡನ್ನಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ : ಡಿಸಿ ಮಹಾಂತೇಶ್ ಬೀಳಗಿ
ಸಿಎಂ ಜೊತೆ ಇನ್ನೊಂದು ಸಭೆ:
ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿರುವ ಸುಧಾಕರ್, ಮಧ್ಯಾಹ್ನ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡ್ತೇನೆ. ಎಲ್ಲಾ ವಿಚಾರಗಳ ಬಗ್ಗೆಯೂ ಮಾತಾಡ್ತೇನೆ. ನೈಟ್ ಕರ್ಫ್ಯೂ ಬಗ್ಗೆಯೂ ಚರ್ಚೆ ಆಗಿದೆ. ತಾಂತ್ರಿಕ ಸಲಹಾ ಸಮಿತಿ ತಜ್ಞರ ಜೊತೆ ಸಭೆ ಮಾಡಿದ್ದೇನೆ. ಶಾಲೆ ಆರಂಭ ಬೇಕಾ ಬೇಡ್ವಾ ಎಂಬುದರ ಬಗ್ಗೆಯೂ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಸಿಎಂ ಜೊತೆ ಚರ್ಚೆಯಾದ ಬಳಿಕ ಎಲ್ಲಾ ಮಾಹಿತಿ ನೀಡ್ತೇನೆ ಎಂದಿದ್ದಾರೆ.