ಬೆಂಗಳೂರು: ಶಾಸಕರ ಭವನದಲ್ಲಿ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಕಾರು ತೊಳೆಯುವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಿಂದ ಶಾಸಕರ ಭವನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪ್ರಸ್ತುತ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವು ದಿನಗಳಿಂದ ನಿರಂತರವಾಗಿ ಶಾಸಕರ ಭವನಕ್ಕೆ ಬಂದು ವಾಹನಗಳನ್ನು ಸ್ವಚ್ಛಗೊಳಿಸಿ ಹೋಗುತ್ತಿದ್ದ. ಆತನ ಸಂಪರ್ಕದಲ್ಲಿ ಯಾರಿದ್ದರು ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ.
ಶಾಸಕರ ಭವನದಲ್ಲಿ ಶಾಸಕರು, ಅವರ ಆಪ್ತ ಸಹಾಯಕರು, ಸಂಬಂಧಿಕರು ಹಾಗೂ ಇತರ ಕಡೆಗಳಿಂದ ಪ್ರತಿದಿನ ನೂರಾರು ಮಂದಿ ಶಾಸಕರ ಭವನಕ್ಕೆ ಬಂದು ಹೋಗುತ್ತಾರೆ. ಇದೀಗ ಅಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ಮತ್ತಷ್ಟು ಆತಂಕ ಎದುರಾಗಿದೆ.
ಕೊರೊನಾ ಎಂಟ್ರಿ ಕೊಟ್ಟಿರುವ ಹಿನ್ನೆಲೆ, ಶಾಸಕರ ಭವನದಲ್ಲೂ ಹೈ ಅಲರ್ಟ್ ಮಾಡಲಾಗಿದ್ದು, ವಿಧಾನಸೌಧ ಹಾಗೂ ವಿಕಾಸಸೌಧ ಆಯಿತು, ಇದೀಗ ಶಾಸಕರ ಭವನಕ್ಕೂ ಕೊರೊನಾ ಕಾಲಿಟ್ಟಿದೆ, ಗೃಹ ಕಚೇರಿ ಕೃಷ್ಣಾಕ್ಕೂ ಬಂದು ಹೋಗಿದೆ.