ಬೆಂಗಳೂರು : ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಐಸಿಯು ಬೆಡ್, ಆಕ್ಸಿಜನ್ ವ್ಯವಸ್ಥೆ ದೊರಕದೆ ಕೊರೊನಾ ರೋಗಿಗಳು ಪರಾದಾಡುವ ಸ್ಥಿತಿ ಎದುರಾಗಿದೆ. ಇದರ ಪರಿಣಾಮ ಕೋವಿಡ್ ಸೋಂಕಿತರು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಸರ್ಕಾರಿ-ಖಾಸಗಿ ಎರಡು ಆಸ್ಪತ್ರೆಗಳಲ್ಲೂ ಸರಿಯಾದ ಸಮಯಕ್ಕೆ ಆಕ್ಸಿಜನ್ ವ್ಯವಸ್ಥೆ ಸಿಗದ ಪರಿಣಾಮ ರೋಗಿಗಳು ಆ್ಯಂಬುಲೆನ್ಸ್ನಲ್ಲಿ ಅಲೆದಾಟ ಮುಂದುವರೆಸಿದ್ದಾರೆ.
ಘಟನೆ 1- ಆಕ್ಸಿಜನ್‌ಗಾಗಿ ಅಲೆದಾಟ : ಯಲಹಂಕದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆ ಹಿನ್ನೆಲೆ ಆಕ್ಸಿಜನ್‌ಗಾಗಿ ಸರ್ಕಾರಿ ಆ್ಯಂಬುಲೆನ್ಸ್ಗಳು ಕ್ಯೂ ನಿಂತಿವೆ. ನಿನ್ನೆಯಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಅಂತ ಸರ್ಕಾರ ಹೇಳಿತ್ತು.
ಆದರೆ, ಪರಿಸ್ಥಿತಿ ಬದಲಾಗಿದ್ದು, ಬೆಳಗ್ಗೆ 5 ಗಂಟೆಯಿಂದ ಕಾದರೂ ಇನ್ನೂ ಆಕ್ಸಿಜನ್ ಸಿಕ್ಕಿಲ್ಲ. ಆಸ್ಪತ್ರೆಗೂ 10 ಸಿಲಿಂಡರ್ಗಳು ಬೇಕಿವೆ. ಬೆಳಗ್ಗೆಯಿಂದ ಕಾಯುತ್ತಿದ್ದು, ಆಕ್ಸಿಜನ್‌ಗಾಗಿ ಪೀಣ್ಯ ತನಕ ಸಿಬ್ಬಂದಿ ಅಲೆದಾಡುತ್ತಿದ್ದಾರೆ.
ಘಟನೆ 2- 'ನೋ ಬೆಡ್' ಬೋರ್ಡ್, ಡೋರ್ ಕ್ಲೋಸ್ : ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಕೋವಿಡ್ ಭೀಕರ ಪರಿಸ್ಥಿತಿ ಬಿಚ್ಚಿಡ್ತಿದೆ. ಶಿವಾಜಿನಗರದ ಚರಕ ಸರ್ಕಾರಿ ಆಸ್ಪತ್ರೆಯಲ್ಲಿ ‘ನೋ ಬೆಡ್ ಬೋರ್ಡ್’ ಹಾಕಲಾಗಿದೆ. ಕೋವಿಡ್ಗೆ ಅಂತ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಇದೀಗ ಅದು ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ, ಬೆಡ್ ಖಾಲಿ ಇಲ್ಲ ಎಂದು ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೋರ್ಡ್ ಹಾಕಿ, ಆಸ್ಪತ್ರೆ ಗೇಟು ಮುಚ್ಚಿದೆ. ಬೆಳಗ್ಗೆ 8 ಗಂಟೆಗೆ ಆ್ಯಂಬುಲೆನ್ಸ್ಗಳು ಬಂದು 11 ಗಂಟೆ ತನಕ ಕಾದು ವಾಪಸ್ ಹೋಗುತ್ತಿವೆ.
ಓದಿ: ಇದೆಂಥಾ ದುಸ್ಥಿತಿ; ರಾಜ್ಯ ರಾಜಧಾನಿಯಲ್ಲಿ ಬೆಡ್ ಸಿಗದೆ ಪಿಕ್ ಅಪ್ ವ್ಯಾನ್‌ನಲ್ಲೇ ಕೊನೆಯುಸಿರೆಳೆದ ಸೋಂಕಿತ!
ಘಟನೆ 3- ಆಕ್ಸಿಜನ್ ಸಿಲಿಂಡರ್ಗಾಗಿ ಡಾಕ್ಟರ್ ಆ್ಯಂಬುಲೆನ್ಸ್ನಲ್ಲಿ ಅಲೆದಾಟ : ನಗರದ ಆತ್ರೇಯಾ ಆಸ್ಪತ್ರೆಯ ವೈದ್ಯ ಡಾ.ನಾರಾಯಣ ಸ್ವಾಮಿ ಎಂಬುವರು, ರೋಗಿಗಳನ್ನ ಉಳಿಸಲು ರಾತ್ರಿಯೆಲ್ಲ ಆ್ಯಂಬುಲೆನ್ಸ್ನಲ್ಲಿ ಆಕ್ಸಿಜನ್ ಸಿಲಿಂಡರ್ಗಾಗಿ ಅಲೆದಾಡಿದ್ದಾರೆ.
ಐದು ಜನರು ಕ್ರಿಟಿಕಲ್ ಕಂಡೀಷನ್ನಲ್ಲಿದ್ದು, ಅರ್ಧ ಗಂಟೆಯಷ್ಟೇ ಆಕ್ಸಿಜನ್ ಬರುತ್ತೆ, ಅದಾದ ಮೇಲೆ ನನ್ನ ಕೈಯಲ್ಲಿ ಏನು ಮಾಡೋಕ್ಕೆ ಆಗಲ್ಲ ಅಂತ ವೈದ್ಯರು ಕೋವಿಡ್ ಭೀಕರತೆ ಬಿಚ್ಚಿಟ್ಟಿದ್ದಾರೆ. ಸದ್ಯ ಮಾಧ್ಯಮಗಳ ವರದಿ ಬಳಿಕ ಸಚಿವರು ಇವರಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದ್ದಾರೆ.
ಘಟನೆ4- ಐಸಿಯು, ವೆಂಟಿಲೇಟರ್ ಇಲ್ಲದೇ: ಮೊನ್ನೆ ಐಸಿಯು ಬೆಡ್ ಇಲ್ಲದೇ ಇಂದಿರಾನಗರದ ಇಎಸ್ಐ ಆಸ್ಪತ್ರೆ ಆವರಣದಲ್ಲೇ ಕೋವಿಡ್ ಸೋಂಕಿತರು ನರಳಾಟ ಅನುಭವಿಸಿದ್ದಾರೆ. ಜೆಜೆನಗರದ ವಿಎಸ್ ಗಾರ್ಡನ್ ನಿವಾಸಿ, 45 ವರ್ಷದ ವ್ಯಕ್ತಿಯ ಕುಟುಂಬದವರು ಆಸ್ಪತ್ರೆಗೆ ಅಲೆದಾಡಿದ ನಂತರ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಇಂದು ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಬೆಡ್ ಸಿಗದೇ ಜನ ನರಳಾಟ ಮುಂದುವರೆದಿದೆ.
ಓದಿ:ಐಸಿಯುನಲ್ಲಿ ಇರೋದು ಸಿಎಂ ಅಲ್ಲ, ಸಿದ್ದರಾಮಯ್ಯ: ಸಚಿವ ಸೋಮಶೇಖರ್ ತಿರುಗೇಟು
ಘಟನೆ5 - ಆಸ್ಪತ್ರೆಗೂ ಕ್ಯೂ, ಚಿತಾಗಾರಕ್ಕೂ ಸಾಲು : ಕೇವಲ ಆಸ್ಪತ್ರೆಯ ಬೆಡ್, ಆಕ್ಸಿಜನ್ ಚಿಕಿತ್ಸೆಗಾಗಿ ಅಷ್ಟೇ ಕ್ಯೂ ಇಲ್ಲ, ಬದಲಿಗೆ ಚಿತಾಗಾರಕ್ಕೂ ಕ್ಯೂ ಇರುವುದನ್ನ ಕಾಣಬಹುದು. ಇಂದು ಬೆಳಗ್ಗೆಯಿಂದ ಪೀಣ್ಯ ಚಿತಾಗಾರದಲ್ಲಿ ಮೃತದೇಹ ಹೊತ್ತು ಬಂದ ಆ್ಯಂಬುಲೆನ್ಸ್ಗಳು ಕ್ಯೂ ನಿಂತಿವೆ. ಸುಮಾರು 13 ಆ್ಯಂಬುಲೆನ್ಸ್ಗಳು ಸಾಲಿನಲ್ಲಿ ನಿಂತಿದ್ದು, ಅಂತ್ಯಕ್ರಿಯೆಗಾಗಿ ಕಾಯುತ್ತಿವೆ.
ನಟ ಸಾಧುಕೋಕಿಲ ಅಣ್ಣನ ಮಗನಿಗೆ ಆಕ್ಸಿಜನ್ ಸಿಗಲಿಲ್ಲ : ಕೊರೊನಾ ಕರಾಳತೆಯ ಬಗ್ಗೆ ನಟ ಸಾಧುಕೋಕಿಲ ಕೂಡ ನೋವು ತೋಡಿಕೊಂಡಿದ್ದರು. ನಮ್ಮ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆದಾಗ ಆಕ್ಸಿಜನ್ ಸಿಗಲಿಲ್ಲ ಎಂದಿದ್ದರು.