ಬೆಂಗಳೂರು: ಮೈಸೂರು ರಸ್ತೆಯ ಕೆಆರ್ ಮಾರುಕಟ್ಟೆ ವಾರ್ಡ್- 139ನ ಆನಂದಪುರದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದು,ಪರಿಣಾಮ ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಅಹ್ಮದ್ ಹಾಗೂ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ವಾರ್ಡ್ನಲ್ಲಿ ಇಂದು ಕೋವಿಡ್ಗೆ ಮೂವರು ಬಲಿಯಾಗಿದ್ದು, ಆರು ಜನ ಸೋಂಕಿತರಿದ್ದಾರೆ. ಈ ಹಿನ್ನೆಲೆ ಆನಂದಪುರಂ ಸ್ಲಂ ಅನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ 700 ಮನೆಗಳಿದ್ದು, ನಾಲ್ಕು ಸಾವಿರ ಜನ ವಾಸಿಸುತ್ತಿದ್ದಾರೆ. ಈಗಾಗಲೇ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಜನರಿಗೆ ಮಾಸ್ಕ್ ಹಾಗೂ ದೈಹಿಕ ಅಂತರ ಕಾಪಾಡುವಂತೆ ಜಾಗೃತಿ ಮೂಡಿಸಲಾಗಿದೆ.
ಮಾರುಕಟ್ಟೆಗಳಿಗೂ ಕಂಟಕ: ಇದೇ ವಾರ್ಡ್ನಲ್ಲಿ ಮಾರುಕಟ್ಟೆ ಇರುವುದರಿಂದ ಸೋಂಕಿತರು ಕೆ.ಆರ್ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗೆ ಓಡಾಡಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸೋಂಕಿತರ ಹಿಸ್ಟರಿ ತಿಳಿದು ಅತಿಹೆಚ್ಚು ಓಡಾಟ ನಡೆಸಿದ್ದರೆ, ಮಾರುಕಟ್ಟೆ ಸ್ಥಗಿತಗೊಳಿಸುವ ಚಿಂತನೆಗೂ ಬರಲಾಗಿದೆ.
ಮಾರುಕಟ್ಟೆಯಲ್ಲಿ ಫುಟ್ ಪಾತ್ ವ್ಯಾಪಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಜನರ ಮಧ್ಯೆ ಸಾಮಾಜಿಕ ಅಂತರವಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಜೊತೆಗೆ ಜನ ಸಂಖ್ಯೆ ಹೆಚ್ಚಿರುವ ಕಾರಣ ಸೀಲ್ಡೌನ್ ಪ್ರದೇಶದಲ್ಲಿ ರ್ಯಾಂಡಮ್ ಕೊರೊನಾ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ.