ಬೆಂಗಳೂರು: ಕೊರೊನಾ ಭಾರೀ ಕೆಟ್ಟ ರೋಗ. ಈ ರೋಗ ಸಾಮಾಜಿಕ ಸಂಬಂಧಗಳನ್ನೇ ಹಾಳು ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಶಿವಾನಂದ ವೃತ್ತ ಸಮೀಪದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೂ ಕೊರೊನಾ ರೋಗ ಬಂದಿತ್ತು. ನಾನು, ನನ್ನ ಹೆಂಡ್ತಿ ಹಾಗೂ ನನ್ನ ಮಗ ಒಂದೇ ಆಸ್ಪತ್ರೆಯಲ್ಲಿದ್ವಿ. ಆದರೂ ಒಬ್ಬರ ಮುಖ ಒಬ್ಬರು ನೋಡೋಕೆ ಆಗ್ತಿರಲಿಲ್ಲ. ಈಚಿನ ದಿನಗಳಲ್ಲಿ ಸಾಮಾಜಿಕ ಸಂಬಂಧಗಳೇ ಕಳೆದು ಹೋಗುತ್ತಿವೆ. ಈ ರೋಗ ಬಂದು ಅದನ್ನು ಇನ್ನಷ್ಟು ಹೆಚ್ಚಾಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ನನ್ನ ಹೆಂಡತಿ ಒಂದೇ ಆಸ್ಪತ್ರೆಯಲ್ಲಿದ್ದರೂ ಒಬ್ಬರ ಮುಖ ಇನ್ನೊಬ್ಬರು ನೋಡೋ ಹಾಗಿರಲಿಲ್ಲ. ಎಂಥ ವಿಪರ್ಯಾಸದ ಸಂಗತಿ ಇದು. ಒಂದು ಆಸ್ಪತ್ರೆಯಲ್ಲಿ ಗಂಡ ಹೆಂಡತಿ ಕೊರೊನಾ ಬಂದು ಅಡ್ಮಿಟ್ ಆಗಿದ್ರು. ಗಂಡ ಆಸ್ಪತ್ರೆಯಲ್ಲೇ ಕೊರೊನಾದಿಂದ ಸತ್ತು ಹೋದ. ಹೆಂಡತಿಗೆ ಗಂಡನ ಮುಖ ನೋಡಲೂ ಆಗಲಿಲ್ಲ, ಸಂಸ್ಕಾರಕ್ಕೂ ಹೋಗಲಾಗಲಿಲ್ಲ ಎಂಬ ದಾರುಣ ಸಂಗತಿಯನ್ನು ವೇದಿಕೆಯಲ್ಲಿ ವಿವರಿಸಿದರು.
ಕೊರೊನಾ ಮಹಾಮಾರಿ ಇಡೀ ರಾಷ್ಟ್ರಗಳ ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಈ ಸಮಸ್ಯೆಗೆ ತುತ್ತಾದ ಪ್ರತಿಯೊಂದು ಕುಟುಂಬದ ಕಥೆಯೂ ಒಂದೊಂದು ರೀತಿ ಇರುತ್ತದೆ. ರೋಗದಿಂದ ಪ್ರಾಣ ಕಳೆದುಕೊಂಡವರ ಕುಟುಂಬದ ಸ್ಥಿತಿ ಒಂದೆಡೆ ಆದರೆ ಈ ಸಮಸ್ಯೆಯನ್ನು ಎದುರಿಸಿ ಗೆದ್ದು ಬಂದವರದ್ದು ಇನ್ನೊಂದು ಕಥೆಯಾಗಿದೆ ಎಂದರು.