ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಜೀವಕ್ಕೆ ಬೆಲೆಯೇ ಇಲ್ಲದ ರೀತಿಯಲ್ಲಿ ಬಿಬಿಎಂಪಿ ನಡೆದುಕೊಳ್ಳುತ್ತಿದೆ. ಶ್ರೀನಗರದ ರಾಮಾಂಜನೇಯ ದೇವಸ್ಥಾನದ ಬಳಿ ಈ ಮನಕಲಕುವ ಘಟನೆ ನಡೆದಿದ್ದು, ಮಳೆ ಬಂದರೂ ರಸ್ತೆಯಲ್ಲೇ ಕೊರೊನಾಗೆ ಬಲಿಯಾದ ವ್ಯಕ್ತಿಯನ್ನು ಮಲಗಿಸಲಾಗಿತ್ತು.
ಮೂರು ದಿನಗಳ ಹಿಂದೆ 62 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಟೆಸ್ಟ್ಗೆ ಒಳಪಟ್ಟಿದ್ರು. ಇಂದು ಬೆಳಗ್ಗೆ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು. ವರದಿ ಬರುತ್ತಿದ್ದಂತೆ ಆಸ್ಪತ್ರೆಗೆ ಸೇರಲು ಮುಂದಾದ ವ್ಯಕ್ಯಿಯು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ಸಂಜೆ 4 ಗಂಟೆಯಾದ್ರೂ ಆ್ಯಂಬುಲೆನ್ಸ್ ಕಳುಹಿಸದೇ ಪಾಲಿಕೆ ನಿರ್ಲಕ್ಷ್ಯ ತೋರಿದೆ.
15 ದಿನಕ್ಕಾಗುವಷ್ಟು ಬಟ್ಟೆ ತುಂಬಿದ ಚೀಲವನ್ನು ಹಿಡಿದು ಕಾದು ಕುಳಿತ್ತಿದ್ದ ಸೋಂಕಿತ ವ್ಯಕ್ತಿ, ನಿಂತಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರ ಹೆಂಡತಿ ಹಾಗೂ ತಂಗಿ ರಸ್ತೆಯಲ್ಲೇ ಮೃತದೇಹವನ್ನು ಮಲಗಿಸಿ ಕಾಯುತ್ತಾ ನಿಂತಿದ್ದರು. ಮಳೆ ಬಂದರೂ ಮೃತದೇಹ ರಸ್ತೆಯಲ್ಲೇ ಇತ್ತು.
ಪಾಲಿಕೆ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದು, ನಗರದ ನಾಗರಿಕರ ಸಾವಿಗೆ ಕಾರಣವಾಗುತ್ತಿದೆ. ಇನ್ನು ಬಳಿಕ ಬಿಬಿಎಂಪಿಯವರು ಬಂದು ಕೊನೆಗೂ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ಸೇರಿಸಿದ್ದಾರೆ.