ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಂದಾಯ ಸಚಿವ ಅಶೋಕ್, ಆರೋಗ್ಯ ಸಚಿವ ಸುಧಾಕರ್, ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಚಿವ ಗೋಪಾಲಯ್ಯ, ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.
ಹೊರರಾಜ್ಯದಿಂದ ರಾಜ್ಯಕ್ಕೆ ವಿಶೇಷವಾಗಿ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಂದ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇದಕ್ಕೆ ಯಾವ ರೀತಿ ಕಡಿವಾಣ ಹಾಕಬೇಕು ಎಂದು ಚರ್ಚೆ ನಡೆಸಲಾಗುತ್ತಿದೆ. ಈಗಾಗಲೇ ನೆರೆಯ ಮಹಾರಾಷ್ಟ್ರ,ಕೇರಳದಿಂದ ಬರುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದ್ದು, ಜಾತ್ರೆ, ಸಾಮೂಹಿಕ ಹಬ್ಬ ಇತ್ಯಾದಿಗೆ ನಿರ್ಬಂಧ ವಿಧಿಸಲಾಗಿದೆ.
ಆಂತರಿಕ ಕೊರೊನಾ ಹಬ್ಬುವಿಕೆಗೆ ಹೇಗೆ ಕಡಿವಾಣ ಹಾಕಬೇಕು, ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಬೇಕಾ? ಗಡಿ ಪ್ರದೇಶದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು, ಶಾಲಾ-ಕಾಲೇಜುಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಲಾಗುತ್ತಿದೆ.
ನೈಟ್ ಕರ್ಫ್ಯೂ ಸೇರಿದಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು, ಕೊರೊನಾ ನಿಯಂತ್ರಣಕ್ಕೆ ಯಾವೆಲ್ಲಾ ಕಠಿಣ ನಿಯಮ ಜಾರಿಗೆ ತರಬೇಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ.. ಕೆಲವೇ ವಾರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಭಾರತ ಅನುಮೋದನೆ: ಡಾ.ರೆಡ್ಡಿಸ್ ವಿಶ್ವಾಸ