ಬೆಂಗಳೂರು: ಆರೋಗ್ಯ ಕಾಳಜಿ ಒಳ್ಳೆಯದೇ. ಅದು ಯಾವಾಗಲೂ ಇರಬೇಕು. ಆದರೆ, ಕೊರೊನಾ ಬಂದ್ಮೇಲೆ ಜನರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ತುಸು ಹೆಚ್ಚಾಗಿರೋದಂತು ಸುಳ್ಳಲ್ಲ. ಅದಕ್ಕಾಗಿ ಬರೀ ಆಸ್ಪತ್ರೆಗಳಲ್ಲಷ್ಟೇ ಕಾಣ್ತಿದ್ದ ವೈದ್ಯಕೀಯ ಪರಿಕರಗಳು ಈಗೀಗ ಬಹುತೇಕರ ಮನೆಗಳಲ್ಲೂ ಕಾಣಿಸುತ್ತಿವೆ.
ಜಗತ್ತಿನೆಲ್ಲೆಡೆ ಕೊರೊನಾ ಭೀತಿ ಇನ್ನೂ ದೂರಾಗಿಲ್ಲ. ಅದೇ ಭೀತಿಯೇ ಜನ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಕಾಳಜಿವಹಿಸುವಂತೆ ಮಾಡಿದೆ. ಹಾಗಾಗಿಯೇ, ಕೊರೊನಾ ರೋಗ ಹಬ್ಬೋದಕ್ಕೂ ಮೊದಲು ಆಸ್ಪತ್ರೆಗಳಲ್ಲಿ ವೈದ್ಯರು ಮಾತ್ರ ಬಳಸುತ್ತಿದ್ದ ಸಾಧನಗಳನ್ನ ಶ್ರೀಸಾಮನ್ಯನೂ ಬಳಸುವಂತಾಗಿದೆ. ಇದರಿಂದಾಗಿ ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್, ಗ್ಲೂಕೋಮೀಟರ್ ಹಾಗೂ ಬಿಪಿ ಆಪರೇಟರ್‌ಗಳನ್ನು ಜನ ಹೆಚ್ಚೆಚ್ಚು ಖರೀದಿಸುವಂತಾಗಿದೆ. ಈಗ ರಾಜ್ಯದಲ್ಲಿ ವೈದ್ಯಕೀಯ ಉಪರಣಗಳ ಬೇಡಿಕೆ ಕೆಲವೆಡೆ ಹೆಚ್ಚಿದ್ರೆ, ಇನ್ನೂ ಕೆಲವೆಡೆ ಅಷ್ಟಕಷ್ಟೇ..
ಬೆಂಗಳೂರಿನಲ್ಲಿ ತಗ್ಗಿದ ವೈದ್ಯಕೀಯ ಉಪಕರಣಗಳ ಬೇಡಿಕೆ: ಮೊದ ಮೊದಲು ಕೊರೊನಾ ಹಬ್ಬುತ್ತಿರುವಾಗ ಜನ ಭೀತಿಗೊಳಗಾಗಿ ಹೆಚ್ಚಾಗಿ ವೈದ್ಯಕೀಯ ಉಪಕರಣಗಳನ್ನು ಖರೀದಿಸುತ್ತಿದ್ದರು. ಹಾಗಾಗಿ ಶೇ.ನೂರರಷ್ಟು ಬೇಡಿಕೆ ಹೆಚ್ಚಿತ್ತು. ಆದರೆ ಅದೀಗ ಶೇ. 30ಕ್ಕೆ ಇಳಿದಿದೆ. ಈಗ ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್ ಮೆಡಿಕಲ್ ಶಾಪ್ನಲ್ಲಿ ಮಾತ್ರವಲ್ಲದೇ ಬೇರೆ ಅಂಗಡಿಗಳಲ್ಲಿಯೂ ಮಾರುತ್ತಿದ್ದಾರೆ. ಆದರೆ, ಮೆಡಿಕಲ್ ಸ್ಟೋರ್ ಬಿಟ್ಟು ಬೇರೆಡೆ ಕೊಂಡುಕೊಳ್ಳುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಬೃಹತ್ ಬೆಂಗಳೂರು ಮೆಡಿಕಲ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಹರೀಶ್ ಸಲಹೆ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿದ ವೈದ್ಯಕೀಯ ಉಪಕರಣಗಳ ಬೇಡಿಕೆ: ಆರಂಭದಲ್ಲಿ ಕೊರೊನಾ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಜನ ವೈದ್ಯರ ಬಳಿ ಚಿಕಿತ್ಸೆಗೆ ಹೋಗುತ್ತಿದ್ದರು. ಆದರೆ, ಈಗ ಬಹುತೇಕ ವೈದ್ಯರು ಕಡಿಮೆ ರೋಗ ಗುಣಲಕ್ಷಣಗಳಿರುವ ಸೋಂಕಿತರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸುವಂತೆ ಸಲಹೆ ನೀಡುತ್ತಿದ್ದಾರೆ. ವೈದ್ಯಕೀಯ ಪರಿಕರಗಳನ್ನು ಬಳಸಿ ಸ್ವಯಂ ಚಿಕಿತ್ಸೆಗೆ ಮನೆಯಲ್ಲೇ ಒಳಗಾಗುವಂತೆ ಸಲಹೆ ನೀಡುತ್ತಿದ್ದಾರೆ. ಅಲ್ಲದೆ ರೋಗದ ಗುಣಲಕ್ಷಣಗಳು ಮಿತಿಮೀರಿದ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಕಿವಿಮಾತು ಹೇಳುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ರೋಗದ ಗುಣ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ವೈದ್ಯಕೀಯ ಪರಿಕರಗಳಿಗೆ ಸಾಕಷ್ಟು ಬೇಡಿಕೆಯೂ ಬಂದಿದೆ.
ಕೊರೊನಾದಿಂದಾಗಿ ವೈದ್ಯಕೀಯ ರಂಗದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ನೆಗಡಿ-ಕೆಮ್ಮಿಗೂ ವೈದ್ಯರ ಬಳಿ ತೆರಳುತ್ತಿದ್ದ ಜನ ಇದೀಗ ಕೊರೊನಾಗೂ ಎದೆಗುಂದದೆ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ತಮಗೆ ತಾವೇ ಆರೈಕೆ ಮಾಡಿಕೊಳ್ಳುತ್ತಿದ್ದಾರೆ.