ಬೆಂಗಳೂರು: ಕೊರೊನಾ ಭೀತಿಯಿಂದ ನೇಕಾರರು ನೇಯ್ದಿರುವ ಬಟ್ಟೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆಲಸ ಮಾಡಲು ಸಾಧ್ಯವಾಗದೆ ಕಳೆದ ಇಪ್ಪತ್ತು ದಿನಗಳಿಂದ ಮಗ್ಗಗಳನ್ನು ನಿಲ್ಲಿಸಿ ನೇಕಾರರು ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ.
ನೇಕಾರರು ಸದ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ನೇಕಾರರ ನೆರವಿಗೆ ಬರದೆ ಹೋದರೆ ಸಾವು ಬಿಟ್ಟು ಬೇರೆ ದಾರಿ ಇಲ್ಲ ಎನ್ನುತ್ತಿದ್ದಾರೆ. ಈ ಕೊರೊನಾದಿಂದಾಗಿ ನೇಯ್ದಿರುವ ಸೀರೆಗಳನ್ನು ಮಾರಾಟ ಮಾಡಲು ಆಗದೆ ತುಂಬಾ ಕಷ್ಟ ಅನುಭವಿಸ್ತಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಬರದೆ ಹೋದರೆ ನಾವು ಸಂಪೂರ್ಣವಾಗಿ ನಶಿಸಿ ಹೋಗುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲೇ ಸುಮಾರು ಎರಡು ಲಕ್ಷ ಮಂದಿ ಮಗ್ಗವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಸದ್ಯ ನೇಕಾರರ ನೆರವಿಗೆ ದೇವಾಂಗ ಸಂಘ ನಿಂತಿದ್ದು, ಅಗತ್ಯವಿರುವ ಬಡ ನೇಕಾರರಿಗೆ ದಿನಸಿ ಪದಾರ್ಥಗಳನ್ನು ಹಂಚುವಲ್ಲಿ ನಿರತವಾಗಿದೆ.